×
Ad

ಡಿಜಿಪಿ ಹುದ್ದೆ ಪದೋನ್ನತಿ ಆದೇಶಕ್ಕೆ ತಡೆಯಾಜ್ಞೆ; ಸಿಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಅರುಣ್ ಚಕ್ರವರ್ತಿ

Update: 2025-10-01 01:02 IST

ಬೆಂಗಳೂರು: ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ತಮಗೆ ಪದೋನ್ನತಿ ನೀಡಿದ್ದ ಸರ್ಕಾರದ ಆದೇಶವನ್ನು ತಡೆ ಹಿಡಿದಿರುವ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣದ (ಸಿಎಟಿ) ಮಧ್ಯಂತರ ಆದೇಶ ಪ್ರಶ್ನಿಸಿ ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

ಸಿಎಟಿ ಸೆಪ್ಟೆಂಬರ್ 19ರಂದು ಹೊರಡಿಸಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಅರುಣ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಹಾಗೂ ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರ, ಅರುಣ್‌ ಚಕ್ರವರ್ತಿ ಹಾಗೂ ಪ್ರತಿವಾದಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಅರ್ಜಿದಾರರಾದ ಅರುಣ್ ಚಕ್ರವರ್ತಿ ಅವರು ಮುಂದುವರಿಯಲು ಅಡ್ಡಿಯಿಲ್ಲ. ಆದರೆ, ಅವರಿಗೆ ಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿರುವ ಸರ್ಕಾರದ ಆದೇಶದ ಬಗ್ಗೆ ಸಿಎಟಿ ನಿರ್ಧರಿಸಬೇಕಿದೆ ಎಂಬ ಅಲೋಕ್ ಕುಮಾರ್ (ಚಕ್ರವರ್ತಿ ಅವರ ಮುಂಬಡ್ತಿ ಆದೇಶವನ್ನು ಸಿಎಟಿ ಮುಂದೆ ಪ್ರಶ್ನಿಸಿರುವ) ಪರ ವಕೀಲರ ಹೇಳಿಕೆ ಪರಿಗಣಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು. ಇದರಿಂದ, ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ಹುದ್ದೆಯಲ್ಲಿ ಅರುಣ್‌ ಚಕ್ರವರ್ತಿ ಮುಂದುವರಿಯಲಿದ್ದಾರೆ.

ಇದಕ್ಕೂ ಮುನ್ನ ಎಡಿಜಿಪಿ ಅಲೋಕ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ತಮ್ಮ ಕಕ್ಷಿದಾರರ ವಿರುದ್ಧ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಿಎಟಿ ಮುಂದೆ ಬಾಕಿಯಿತ್ತು. ದೋಷಾರೋಪಣಾ ಮೆಮೋಗೆ ಸಿಎಟಿ ತಡೆ ನೀಡಿದ್ದಾಗಲೇ ಅಲೋಕ್‌ ಅವರ ಸೇವಾ ಹಿರಿತನ ಉಪೇಕ್ಷಿಸಿ, ಅರುಣ್‌ ಚಕ್ರವರ್ತಿ ಹಾಗೂ ಇತರ ಅಧಿಕಾರಿಗಳಿಗೆ ಡಿಜಿಪಿಯಾಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ. ಇದರಿಂದ, ಸರ್ಕಾರದ ಆದೇಶವನ್ನು ಅಲೋಕ್‌ ಕುಮಾರ್‌ ಸಿಎಟಿ ಮುಂದೆ ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ರೂಬೆನ್ ಜೇಕಬ್‌, ಸಿಬಿಐ ಅಭಿಪ್ರಾಯದಂತೆ ಅಲೋಕ್‌ ಕುಮಾರ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ಆರೋಪಗಳ ಮೆಮೋ ಸಹ ನೀಡಲಾಗಿತ್ತು. ಅದಕ್ಕೆ ಸಿಎಟಿ ತಡೆ ನೀಡಿದೆ. ಆರೋಪಪಟ್ಟಿ ಇರುವುದರಿಂದ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ಸಾಧ್ಯವಿರಲಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ಪ್ರಕರಣವೇನು?

ಅರುಣ್‌ ಚಕ್ರವರ್ತಿ ಅವರಿಗೆ ಡಿಜಿಪಿ ಹುದ್ದೆಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರ 2025ರ ಸೆಪ್ಟೆಂಬರ್ 12ರಂದು ಅಧಿಸೂಚನೆ ಹೊರಡಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಪೊಲೀಸ್‌ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ (ಎಡಿಜಿಪಿ) ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಸಿಎಟಿಯು ಸರ್ಕಾರದ ಆದೇಶಕ್ಕೆ ಸೆಪ್ಟೆಂಬರ್ 19ರಂದು ಮಧ್ಯಂತರ ತಡೆಯಾಜ್ಞೆ‌ ನೀಡಿತ್ತು. ಇದರಿಂದ, ಅರುಣ್ ಚಕ್ರವರ್ತಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News