ಬಿಡದಿ | ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ದುರಂತ: ಮೂವರು ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.11: ಬಿಡದಿ ಬಳಿಯ ಬಿಮೇನಹಳ್ಳಿ ಗ್ರಾಮದ ಶೆಡ್‍ವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಏಳು ಮಂದಿ ಕಾರ್ಮಿಕರಲ್ಲಿ ಮೂವರು ಚಿಕಿತ್ಸೆ ಫಲಿಸದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಮನ್ರೂಲ್ ಶೇಖ್, ಜಾಯಿದ್ ಅಲಿ ಹಾಗೂ ಶಪೀಜುಲ್ ಶೇಕ್ ಎಂಬುವರು ಮೃತಪಟ್ಟವರೆಂದು ಗುರುತಿಸಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ನಾಲ್ವರು ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿರುವುದಾಗಿ ಗೊತ್ತಾಗಿದೆ.
ಇತ್ತೀಚಿಗೆ ಬಿಡದಿ ಬಳಿಯ ಬಿಮೇನಹಳ್ಳಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರು ಇದ್ದ ತಾತ್ಕಾಲಿಕವಾಗಿ ಶೆಡ್‍ನಲ್ಲಿ ಅಡುಗೆ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿತ್ತು. ಈ ಪರಿಣಾಮ 7 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಪಶ್ಚಿಮ ಬಂಗಾಳ ಮೂಲದ ಅಸನ್ ಮಲ್ಲಿಕ್, ಜಾಯಿದ್ ಅಲಿ, ಕಬ್ಜುಲ್ ಶೇಕ್, ಶಪೀಜುಲ್ ಶೇಕ್, ಜಿಯಾಬುರ್ ಶೇಕ್, ನೂರ್ ಜಮಲ್, ಮನ್ರೂಲ್ ಶೇಕ್ ಗಾಯಗೊಂಡ ಕಾರ್ಮಿಕರಾಗಿದ್ದರು. ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.