×
Ad

ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿ ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ: ಬಿ.ಕೆ.ಹರಿಪ್ರಸಾದ್

''ಸರಳತೆ ಶ್ರೀಮಂತಿಕೆಯನ್ನು ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ''

Update: 2025-10-17 11:30 IST

ಬಿ.ಕೆ.ಹರಿಪ್ರಸಾದ್‌ 

ಬೆಂಗಳೂರು: ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಅವರು, ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡ ವರ್ಗದವರ ಏಳಿಗೆಗಾಗಿ ಸರಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲುಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ಎಂದು ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರಕಾರದಿಂದಲೇ ಭೂಮಿ, ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ಧಟತನದ ಪರಮಾವಧಿ. ಸರಳತೆ ಶ್ರೀಮಂತಿಕೆಯನ್ನು ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ...! ಎಂದು ಹೇಳಿರುವ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಈ ಪೋಸ್ಟನ್ನು ಇನ್ಫೋಸಿಸ್, ಸುಧಾಮೂರ್ತಿಯವರ ಎಕ್ಸ್ ಖಾತೆಗೂ ಟ್ಯಾಗ್ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ಇನ್ಫೋಸಿಸ್ ಮುಖ್ಯಸ್ಥ ಡಾ.ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ನಿರಾಕರಿಸಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾವು ಹಿಂದುಳಿದ ಯಾವುದೇ ಜಾತಿಗೆ ಸೇರಿಲ್ಲ. ಹೀಗಾಗಿ ಈ ಸಮೀಕ್ಷೆ ಸರಕಾರಕ್ಕೆ ಉಪಯೋಗವಿಲ್ಲ. ಆದ್ದರಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಡಾ.ನಾರಾಯಣ ಮೂರ್ತಿ ದಂಪತಿ ಸ್ವಯಂ ದೃಢೀಕರಣ ಪತ್ರ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News