×
Ad

ಐಎಂಎ ಹಗರಣದ ಸಂತ್ರಸ್ತರಿಗೆ 80 ಕೋಟಿ ರೂ. ಮರುಪಾವತಿ: ಶಾಸಕ ರಿಝ್ವಾನ್ ಅರ್ಶದ್

Update: 2026-03-07 21:18 IST

ಬೆಂಗಳೂರು: ಐಎಂಎ ಹಗರಣದಲ್ಲಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯಾಲಯದ ಮಾರ್ಗಸೂಚಿಯನ್ವಯ ಮುಂದಿನ ವಾರ ಸಕ್ಷಮ ಪ್ರಾಧಿಕಾರವು 80 ಕೋಟಿ ರೂ.ಗಳನ್ನು ಮರು ಪಾವತಿ ಮಾಡಲಿದೆ ಎಂದು ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದರು.

ಶನಿವಾರ ಇಲ್ಲಿನ ವಸಂತ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಗರಣದಿಂದಾಗಿ ಬಹುಪಾಲು ಬಡ ಹಾಗು ಮಧ್ಯಮ ವರ್ಗದ ಕುಟುಂಬಗಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಯಿತು ಎಂದು ಹೇಳಿದರು.

ಕಳೆದ ವರ್ಷ 112 ಕೋಟಿ ರೂ.ಗಳನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಈಗ 80 ಕೋಟಿ ರೂ.ಗಳನ್ನು ಮರು ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ಐಎಂಎ ಸಂಸ್ಥೆಯ ಆಸ್ತಿಗಳು ಕೆಳಹಂತದ ನ್ಯಾಯಾಲಯ, ಜಾರಿ ನಿರ್ದೇಶನಾಲಯ(ಈ.ಡಿ)ದಲ್ಲಿ ಸಿಲುಕಿದ್ದರಿಂದ ಅವುಗಳನ್ನು ಬಿಡಿಸಿಕೊಂಡು, ಹರಾಜು ಹಾಕುವ ಪ್ರಕ್ರಿಯೆ ನಡೆಸಲು ಹೆಚ್ಚಿನ ಸಮಯ ತಗುಲಿತು. ಆದರೆ, ಸಕ್ಷಮ ಪ್ರಾಧಿಕಾರವು ತನ್ನ ನಿರಂತರ ಪ್ರಯತ್ನದಿಂದ ಆ ಆಸ್ತಿಗಳನ್ನು ಹರಾಜು ಹಾಕಿ, ಸಂತ್ರಸ್ತರಿಗೆ ಅವರ ಹಣವನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನೆರವು ಇಲ್ಲದೆ, ಇಂತಹ ವಂಚನೆಗಳು ನಡೆಯಲು ಸಾಧ್ಯವಿಲ್ಲ. ಆದುದರಿಂದ, ಜನಸಾಮಾನ್ಯರು ಯಾವುದೆ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಬದಲು ಅದರ ಪೂರ್ವಾಪರವನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳುವುದು ಉತ್ತಮ ಎಂದು ರಿಝ್ವಾನ್ ಅರ್ಶದ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News