Bengaluru | ಲೋಕಾಯುಕ್ತ ದಾಳಿ ಪ್ರಕರಣ: ಬಿಡಿಎ ಅಧಿಕಾರಿಯ ಬಳಿ 3 ಕೋಟಿ ರೂ. ಗೂ ಅಧಿಕ ಸಂಪತ್ತು
Update: 2026-03-08 00:02 IST
ಬೆಂಗಳೂರು: ನಿಗದಿತ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು, ಬಿಡಿಎ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ನಾಲ್ಕು ಸ್ಥಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಪತ್ತು ಪತ್ತೆಯಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ವಲಯ ಅರಣ್ಯಾಧಿಕಾರಿ ಎ.ಎಲ್.ದಾಳೇಶ್ ಅವರ ನಿವಾಸ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಶೋಧನಾ ಕಾರ್ಯ ಕೈಗೊಂಡರು.
ಈ ವೇಳೆ ಎ.ಎಲ್.ದಾಳೇಶ್‍ಗೆ ಸಂಬಂಧಿಸಿದಂತೆ 3 ನಿವೇಶನಗಳು, 2 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ, 17 ಎಕರೆ 20 ಗುಂಟೆ ಕೃಷಿ ಜಮೀನು ಸೇರಿ ಒಟ್ಟು ಮೌಲ್ಯ 2,70,30,000 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾದರೆ, 1.35 ಲಕ್ಷ ರೂ. ನಗದು, 13 ಲಕ್ಷ ಮೌಲ್ಯದ ಚಿನ್ನಾಭರಣ, 34.50 ಲಕ್ಷ ಮೌಲ್ಯದ ವಾಹನಗಳು ಚರ ಆಸ್ತಿ ಒಳಗೊಂಡತೆ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಪತ್ತು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟನೆ ತಿಳಿಸಿದೆ.