ಜಗನ್ನಾಥ ಓಲೇಕಾರ್ ವರ್ಗಾವಣೆ ಎತ್ತಿಹಿಡಿದ ಹೈಕೋರ್ಟ್; ಮೇಲ್ಮನವಿ ವಜಾ
ಬೆಂಗಳೂರು: ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ (ಅಸೋಸಿಯೇಟ್ ಪ್ರೊಫೆಸರ್) ಜಗನ್ನಾಥ ಓಲೇಕಾರ್ ಅವರನ್ನು ಮಂಡ್ಯದ ವಿಸಿ ಫಾರಂಗೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.
ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ಸ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಜಗನ್ನಾಥ ಓಲೇಕಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿದಾರರ ಶ್ರೇಣಿಯನ್ನು ಸರ್ಕಾರ ಕೆಳಗಿಳಿಸಿಲ್ಲ. ಬದಲಿಗೆ ಹಾಲಿ ಇದ್ದ ಸ್ಥಾನಕ್ಕಿಂತ ಉನ್ನತ ಶ್ರೇಣಿಯನ್ನು ನೀಡಿದೆ ಮತ್ತು ಅವರ ವರ್ಗಾವಣೆ 2005ರ 'ವಿಶ್ವವಿದ್ಯಾಲಯ ವರ್ಗಾವಣೆ ನಿಯಮ'ಗಳಿಗೆ ಅನುಗುಣವಾಗಿವೆಯೇ ಇದೆ ಎಂದು ಆದೇಶಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, 2005ರ ನಿಯಮಗಳ ಪ್ರಕಾರ ಪ್ರತಿಯೊಬ್ಬ ಶಿಕ್ಷಕ, ಸೇವಾ ಸಿಬ್ಬಂದಿ ಅಥವಾ ಸಿಬ್ಬಂದಿ ಬೆಂಗಳೂರು ಕ್ಯಾಂಪಸ್ ಹೊರತುಪಡಿಸಿ ಹೊರಗೆ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಅದರಂತೆ, ಮೇಲ್ಮನವಿದಾರರ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ವರ್ಗಾವಣೆಗೂ ಮುನ್ನ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿತ್ತು ಎಂಬ ಮೇಲ್ಮನವಿದಾರರ ವಾದ ತಳ್ಳಿಹಾಕಿರುವ ನ್ಯಾಯಪೀಠ, ನಿಯಮಗಳ ಪ್ರಕಾರ ವರ್ಗಾವಣೆಗೆ ಭಾರತ ಸರ್ಕಾರದ ಅರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಗಳ ಜತೆ ಸಮಾಲೋಚನೆ ನಡೆಸಬೇಕಾದ ಅಗತ್ಯತೆ ಇಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಓಲೇಕಾರ್ ಅವರ ವರ್ಗಾವಣೆ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಮಂಡ್ಯದ ವಿಸಿ ಫಾರಂ ಕೂಡ ಕೃಷಿ ವಿಜ್ಞಾನ ವಿವಿಯ ಒಂದು ಭಾಗವೇ ಆಗಿದೆ. ಅವರನ್ನು ಬೇರೆ ಹೊಸ ವಿವಿಗೆ ವರ್ಗಾವಣೆ ಮಾಡಿದ್ದರೆ ಆಗ ಬೇರೆಯದೇ ಸಂದರ್ಭ ಎದುರಾಗುತ್ತಿತ್ತು. ಸದ್ಯ ಈ ಮೇಲ್ಮನವಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಆದ್ದರಿಂದ, ವರ್ಗಾವಣೆ ಆದೇಶದಂತೆ ಅರ್ಜಿದಾರರು ವಿವಿ ಫಾರಂನಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿದೆ.
ಪ್ರಕರಣವೇನು?
ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಗನ್ನಾಥ್ ಓಲೇಕಾರ್ ಅವರನ್ನು 2024ರ ಜುಲೈ 8ರಂದು ಮಂಡ್ಯದ ವಿಸಿ ಫಾರಂಗೆ ವರ್ಗಾವಣೆ ಮಾಡಲಾಗಿತ್ತು. ಈ ಆದೇಶ ಪ್ರಶ್ನಿಸಿ ಓಲೇಕಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 27ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಓಲೇಕಾರ್ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಭಾಗೀಯ ನ್ಯಾಯಪೀಠ 2024ರ ನವೆಂಬರ್ 11ರಂದು ಓಲೇಕಾರ್‌ಗೆ ರಜೆಯ ಮೇಲೆ ತೆರಳಲು ಅನುಮತಿ ನೀಡಿ, ವರ್ಗಾವಣೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿತ್ತು. ಇದೀಗ, ಮೇಲ್ಮನವಿ ವಜಾಗೊಳಿಸಿ ಅಂತಿಮ ಆದೇಶ ನೀಡಿದೆ.