×
Ad

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ | ಒಳಮೀಸಲಾತಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಂದ ಸಿಎಂಗೆ ಅಭಿನಂದನೆ

Update: 2026-01-08 22:44 IST

ಬೆಂಗಳೂರು : ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಬಳಿಕ ಮೊದಲ ಬಾರಿಗೆ ಅದರ ಸೌಲಭ್ಯವನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದ ವೈದ್ಯಕೀಯ ಸ್ನಾತಕೋತ್ತರ ಉನ್ನತ(ಎಂಎಸ್, ಎಂಡಿ) ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನಿಯೋಗ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.

ಗುರುವಾರ ಇಲ್ಲಿನ ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗೆ ಸಿಹಿ ತಿನ್ನಿಸಿ, ಹೂವಿನ ಹಾರ, ಹೂವಿನ ಗುಚ್ಛ ಕೊಟ್ಟು ಕೃತಜ್ಞತೆ ಸಲ್ಲಿಸಲಾಯಿತು. ಮಾದಿಗ ಸಮುದಾಯಕ್ಕೆ ಉನ್ನತ ಶಿಕ್ಷಣ ಗಗನ ಕುಸಮವಾಗಿತ್ತು. ಅದರಲ್ಲೂ ಎಂಎಸ್, ಎಂಡಿ ಪ್ರವೇಶ ಪಡೆಯಲು ಸಾಧ್ಯವೇ ಇರಲಿಲ್ಲ. ಆದರೆ, ಒಳಮೀಸಲಾತಿ ಜಾರಿ ಬಳಿಕ ‘ನೀಟ್ ಪರೀಕ್ಷೆ’ ಬರೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳೆಲ್ಲರಿಗೂ ಮೊದಲ ಬಾರಿಗೆ ಪ್ರವೇಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.

ಮಕ್ಕಳು, ಮೂಳೆ, ನರರೋಗ ಸೇರಿ ಬಹಳ ಬೇಡಿಕೆ ಇರುವ ವಿಭಾಗಗಳೇ ನಮಗೆ ದೊರೆತಿವೆ. ಇದೆಲ್ಲ ಸಾಧ್ಯವಾಗಿದ್ದು ಒಳಮೀಸಲಾತಿ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯನವರಿಂದ. ವಿರೋಧಗಳು, ಗೊಂದಲಗಳ ಮಧ್ಯೆಯೂ ತಾವು ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ನಾವೆಲ್ಲರೂ ಕನಸಲ್ಲೂ ಕಾಣಲು ಸಾಧ್ಯವಾಗದ ಎಂಎಸ್, ಎಂಡಿ ಉನ್ನತ ಶಿಕ್ಷಣದ ಅತ್ಯುತ್ತಮ ವಿಭಾಗಗಳಿಗೆ ಆಯ್ಕೆಗೊಂಡಿದ್ದೇವೆ. ಅರ್ಜಿ ಸಲ್ಲಿಸಿದ ಬಹುತೇಕರಿಗೂ ಪ್ರವೇಶ ಸಿಕ್ಕಿದೆ ಎಂದು ಸಂಭ್ರಮಿಸಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗದ ಬಳಿಕ ಕೆಲ ಮಾರ್ಪಾಡು ಮಾಡಿ ಒಳಮೀಸಲಾತಿ ಜಾರಿಗೊಳಿಸಿದ ತಾವು, ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಕೈಗೊಂಡ ದಿಟ್ಟ ನಡೆಗೆ ಅನೇಕ ಅಡ್ಡಿ ಆತಂಕಗಳು ಎದುರಾಗಿದ್ದವು. ಅಲೆಮಾರಿ ಸಮುದಾಯ ಕೋರ್ಟ್ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಉದ್ಯೋಗ ನೇಮಕಾತಿಗೆ ತಡೆ ನೀಡಿದೆ. ಆದರೆ, ಶೈಕ್ಷಣಿಕ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಒಳಮೀಸಲಾತಿ ಜಾರಿ ಎಷ್ಟು ಉಪಯುಕ್ತವೆಂಬ ವಾಸ್ತವ ಸತ್ಯವನ್ನು ಮಾದಿಗ ಸಮುದಾಯದ ನಾವುಗಳು ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದೇ ಸಾಕ್ಷಿ ಎಂದರು.

ಇಂತಹದ್ದೊಂದು ಅವಕಾಶ ಕಲ್ಪಿಸಿಕೊಟ್ಟ ತಮಗೆ ಮಾದಿಗ ಸಮುದಾಯ ಸದಾ ಕೃತಜ್ಞವಾಗಿರುತ್ತದೆ. ಅದರಲ್ಲೂ ನಾವುಗಳು ನಿಮ್ಮ ಕೊಡುಗೆ ಸದಾ ಸ್ಮರಿಸುತ್ತೇವೆ. ಜೊತೆಗೆ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ನಾವು ನಿಮ್ಮನ್ನು ಪ್ರತಿಕ್ಷಣ ನೆನಪು ಮಾಡಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಸಂಸ, ಮಾದಿಗ ಸೇರಿ ಅನೇಕ ಸಂಘಟನೆಗಳು ಮೂರವರೇ ದಶಕಗಳ ನಡೆಸಿದ ಹೋರಾಟದ ಫಲ ಹಾಗೂ ವಿರೋಧ ಲೆಕ್ಕಿಸದೆ ತಾವು ಒಳಮೀಸಲಾತಿ ಜಾರಿಗೊಳಿಸಿದ್ದರಿಂದ ನಿರೀಕ್ಷೆಗೂ ಮೀರಿ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಮೊದಲ ಬಾರಿಗೆ ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು.

ಕೋರ್ಟ್‍ನಲ್ಲಿ ಉದ್ಯೋಗ ನೇಮಕಾತಿಗೆ ಇರುವ ತಡೆಯಾಜ್ಞೆ ತೆರವುಗೊಳಿಸಿದರೆ ಇದೇ ರೀತಿ ಮಾದಿಗ ಸಮುದಾಯ ಸರಕಾರಿ ಕೆಲಸವನ್ನು ಪಡೆದುಕೊಂಡು ಬದುಕು ಕಟ್ಟಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಶೀಘ್ರ, ತ್ವರಿತ ಕ್ರಮಕೈಗೊಳ್ಳಬೇಕು. ಮೀಸಲಾತಿ ಇದ್ದರೂ 101 ಜಾತಿಗಳ ಪೈಪೋಟಿಯಲ್ಲಿ ಮಾದಿಗರು ಉನ್ನತ ಶಿಕ್ಷಣ, ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಹಿಂದುಳಿಯುತ್ತಿದ್ದರು. ಈ ಸತ್ಯವನ್ನು ಅಂಕಿ-ಅಂಶಗಳ ಮೂಲಕ ಅರಿತು ಹೋರಾಟ ನಡೆಸಿದ್ದು ಹಾಗೂ ತಮ್ಮ ಬದ್ಧತೆ ಕಾರಣಕ್ಕೆ ಒಳಮೀಸಲಾತಿ ಜಾರಿಗೊಂಡಿದೆ. ಅದರ ಮೊದಲ ಫಲಾನುಭವಿಗಳು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಒಳ್ಳೆಯ ವೈದ್ಯರಾಗಿ: ‘ಒಳಮೀಸಲಾತಿ ಜಾರಿ ಅನೇಕ ವರ್ಷಗಳ ಬೇಡಿಕೆ ಅಗಿತ್ತು. ಅದನ್ನು ನಾವುಗಳು ಜಾರಿಗೊಳಿಸಿ, ಕಾನೂನು ರೂಪ ನೀಡಿ ಅನುಷ್ಠಾ ಗೊಳಿಸಿದ್ದೇವೆ. ನೀವು ನನಗೆ ಸಿಹಿ ತಿನ್ನಿಸಿ, ಕೃತಜ್ಞತೆ ಸಲ್ಲಿಸಿರುವುದು ಖುಷಿ ಆಗಿದೆ. ಅದಕ್ಕಿಂತಲೂ ಹೆಚ್ಚು ಸಂತಸ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಉಂಟು ಮಾಡಿದೆ. ವ್ಯಾಸಂಗ ವೇಳೆ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಬಳಿಕ ಒಳ್ಳೆಯ ವೈದ್ಯರಾಗಿ ಸಮಾಜ ಸೇವೆ ಮಾಡಿ. ಆಗ ಒಳಮೀಸಲಾತಿ ಜಾರಿಗೊಳಿಸಿದ್ದು ಸಾರ್ಥಕ ಪಡೆದುಕೊಳ್ಳಲಿದೆ. ಅನೇಕ ಸಮುದಾಯಗಳು ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿದ್ದವು. ಒಳಮೀಸಲಾತಿ ಜಾರಿಯಿಂದ ಸಮ ಸಮಾಜ ನಿರ್ಮಾಣಕ್ಕೆ ಸಹಕಾರದ ಜೊತೆಗೆ ಅಸ್ಪೃಶ್ಯ, ಹಿಂದುಳಿದ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News