Bengaluru | ವೆನೆಝುವೆಲಾ ಮೇಲಿನ ಅಮೆರಿಕಾ ದಾಳಿ ಖಂಡಿಸಿ ಎಡಪಕ್ಷಗಳ ಪ್ರತಿಭಟನೆ
ಬೆಂಗಳೂರು : ವೆನೆಝುವೆಲಾ ವಿರುದ್ಧ ಅಮೆರಿಕಾದ ಆಕ್ರಮಣ ಮತ್ತು ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣ, ಅಂತರ್ ರಾಷ್ಟ್ರೀಯ ಕಾನೂನು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಖಂಡಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಿಪಿಐ, ಸಿಪಿಎಂ, ಸಿಪಿಐ(ಎಂಎಲ್), ಎಸ್‍ಯುಸಿಐ ಹಾಗೂ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ, ವೆನೆಜುವೇಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿರುವುದು, ವೆನೆಜುವೇಲಾದ ಆಕ್ರಮಣದ ಹಿಂದಿನ ದುರುದ್ದೇಶವಾಗಿದೆ. ಆದ್ದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದ ಆಕ್ರಮಣವನ್ನು ಖಂಡಿಸಿ ವೆನೆಜುವೇಲಾದೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ, ಅಮೇರಿಕಾದಂತ ಬೃಹತ್ ರಾಷ್ಟ್ರದ ಅಧ್ಯಕ್ಷ ನೆರೆಯ ಸಣ್ಣದ ರಾಷ್ಟ್ರದ ಅಧ್ಯಕ್ಷರನ್ನು ಬೀದಿ ರೌಡಿಯಂತೆ ಅಪಹರಣ ಮಮಾಡುವುದು ನಾಗರೀಕತೆಗೆ ನಾಚಿಕೆಗೇಡಿನ ಸಂಗತಿ, ಇದು ಅಮೇರಿಕಾದ ಇವತ್ತಿನ ವಿದ್ಯಮಾನವಲ್ಲ. ಮೊದಲನೇ ಜಾಗತಿಕ ಯುದ್ಧದ ನಂತರ ಜಗತ್ತಿನ ಆರ್ಥಿಕತೆ ಮತ್ತು ಸಂಪತ್ತಿನ ಮೇಲೆ ನಿಯಂತ್ರಣ ಹೊಂದಬೇಕು ಎಂಬ ಸಾಮ್ರಾಜ್ಯಶಾಹಿ ಸಂಘರ್ಷದ ಮುಂದುವರಿದ ಭಾಗವಾಗಿದೆ ಎಂದು ಹೇಳಿದರು.
ಇವತ್ತು ಜಗತ್ತಿನಾದ್ಯಂತ ಪ್ರಜಾಸತಾತ್ಮಕ ಶಕ್ತಿಗಳು ಹೋರಾಟ ಮಾಡಬೇಕಿದೆ. ಅಮೇರಿಕಾ ಸಾಮ್ರಾಜ್ಯಶಾಹಿಗೆ ಹಿಂದೆ ಅನೇಕ ದೇಶಗಳು ಎದುರಾಗಿ ನಿಂತಿದ್ದವು. ಅದರ ಭಾಗವಾಗಿದ್ದ ಭಾರತ ಇವತ್ತು ಮೌನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‍ಗಿಂತ ಭಿನ್ನವಾಗಿಲ್ಲ. ಅದೇ ಮನಸ್ಥಿತಿ ನಮ್ಮ ದೇಶದ ಪ್ರಧಾನಮಂತ್ರಿಗೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂಎಲ್-ಲಿಬರೇಶನ್) ಕಾರ್ಯದರ್ಶಿ ಕ್ಲಿಫ್ಟನ್ ಡಿ. ರೊಜಾರಿಯೋ, ಎಸ್‍ಯುಸಿಐ ಕಾರ್ಯದರ್ಶಿ ಉಮಾ, ಹಿರಿಯ ಮುಖಂಡ ಜಿ.ಎನ್.ನಾಗರಾಜ್, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಎನ್.ಗಾಯತ್ರಿ, ಇ.ಪಿ.ಮೆನನ್, ಅನಿಲ್, ಸೈಯ್ಯದ್ ಶಫಿ ವುಲ್ಲಾಖಾನ್ ಮತ್ತಿತರರು ಹಾಜರಿದ್ದರು.