ದುಬ್ಬನಶಶಿಯ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದುಬ್ಬನಶಶಿಯ ಕಡಲ ತೀರದಲ್ಲಿ ಸಮುದ್ರ ಕೊರತೆ ಪ್ರತಿಬಂಧಕ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಂಟ್ವಾಳ ತಾಲೂಕಿನ ಸರಪಾಡಿ ಮತ್ತು ಇತರೆ 95 ಜನವಸತಿಗಳಿಗೆ 16.70 ಕೋಟಿ ರೂ.,ಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದರು.
2024-2026ನೆ ಸಾಲಿನ ಪಿಎಂ-ಅಭಿಮ್ ಯೋಜನೆಯಡಿ ರಾಜ್ಯಾದಾಧ್ಯಂತ 196 ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು 12.74 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲು ಘಟನೋತ್ತರ ಅನುಮೋದನೆ ನೀಡಲಾಗಿದೆ. ಅದೇ ರೀತಿ, ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣ ಖರೀದಿಗೆ 4 ಕೋಟಿ ರೂ., ಅನುದಾನ ಮೀಸಲಿಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.