×
Ad

ರಾಜ್ಯಪಾಲರು ಮಸೂದೆಗಳನ್ನು ತಡೆಹಿಡಿಯುವುದು ಸಂವಿಧಾನಕ್ಕೆ ಮಾಡುವ ದ್ರೋಹ : ಸುದರ್ಶನ್ ರೆಡ್ಡಿ

‘ದಕ್ಷಿಣ ಭಾರತದ ಸಮಾಜವಾದಿ ಸಮಾವೇಶ’

Update: 2026-01-20 20:35 IST

ಬೆಂಗಳೂರು : ರಾಜ್ಯಪಾಲರು ಜನಪ್ರತಿನಿಧಿಗಳಿಂದ ಅಂಗೀಕರಿಸಿದ ಮಸೂದೆಗಳನ್ನು ವರ್ಷಗಟ್ಟಲೆ ತಡೆಹಿಡಿಯುತ್ತಿದ್ದಾರೆ. ಇದು ಸಂವಿಧಾನಕ್ಕೆ ಮಾಡುವ ದ್ರೋಹ ಎಂದು ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಖಂಡಿಸಿದ್ದಾರೆ.

ಮಂಗಳವಾರ ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮಾಜವಾದಿ ಸಮಾಗಮ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ‘ದಕ್ಷಿಣ ಭಾರತದ ಸಮಾಜವಾದಿ ಸಮಾವೇಶ’ದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ರಾಜ್ಯಪಾಲರ ಹುದ್ದೆಯು ಬ್ರಿಟಿಷ್‌ ಕಾಲದ ಪರಂಪರೆಯಾಗಿದೆ. ರಾಜ್ಯ ಸರಕಾರಗಳಿಗೆ ರಾಜ್ಯಪಾಲರನ್ನು ಪ್ರಶ್ನಿಸುವ ಅಧಿಕಾರವಿಲ್ಲದಂತಾಗಿದೆ. ಹೀಗಾಗಿ ಮಸೂದೆಗಳನ್ನು ವರ್ಷಗಟ್ಟಲೆ ತಡೆಹಿಡಿಯುತ್ತಾರೆ. ಆದುದರಿಂದ ಮಸೂದೆಗೆ ಒಪ್ಪಿಗೆ ನೀಡಲು ಸುಪ್ರೀಂ ಕೋರ್ಟ್ ಸಮಯ ಮಿತಿಯನ್ನೂ ನಿಗದಿಪಡಿಸಿದೆ. ಆದರೂ ದೇಶದಲ್ಲಿ ಸಮಸ್ಯೆ ಮುಂದುವರೆಯುತ್ತಿದೆ ಎಂದು ಅವರು ಆರೋಪಿಸಿದರು.

ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ರಾಜ್ಯಗಳು ಕೇಂದ್ರದ ಅಧೀನ ಸಂಸ್ಥೆಗಳಲ್ಲ ಅಥವಾ ಅದರ ಉಪ ಘಟಕಗಳೂ ಅಲ್ಲ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯಗಳು ಕೇಂದ್ರಕ್ಕೆ ಸಮಾನವಾಗಿವೆ ಎಂಬುದನ್ನು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಕೇಂದ್ರವೇ ಶ್ರೇಷ್ಠ-ರಾಜ್ಯಗಳು ಅಧೀನ ಎಂಬ ಭಾವನೆಯನ್ನು ಬೆಳೆಸಲಾಗುತ್ತಿದೆ. ರಾಜ್ಯಗಳ ಸ್ವಾಯತ್ತತೆಯ ಮೇಲೆ ಪ್ರತಿದಿನ ಆಕ್ರಮಣ ನಡೆಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಒಕ್ಕೂಟ ವ್ಯವಸ್ಥೆಯ ಮೂಲ ಉದ್ದೇಶವೇ ಅಧಿಕಾರ ಕೇಂದ್ರೀಕರಣವನ್ನು ವಿರೋಧಿಸುವುದಾಗಿದೆ. ಆದರೂ, ಇಂತಹ ಧೋರಣೆಗಳು ಏಕೆ ಬೆಳೆಯುತ್ತಿವೆ? ರಾಜ್ಯಗಳ ಅಧಿಕಾರವನ್ನು ಏಕೆ ಕಸಿದುಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಈ ಒಕ್ಕೂಟ ವ್ಯವಸ್ಥೆಯು ಹತ್ತು ವರ್ಷಗಳಿಂದ ಕೇಂದ್ರೀಕೃತ ಅಧಿಕಾರವನ್ನು ಎದುರಿಸುತ್ತಿದೆ. ಇದು ರಾಜ್ಯಗಳ ಸಾರ್ವಭೌಮತೆಯನ್ನು ನಾಶಮಾಡುತ್ತದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370 ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ಇದು ಮೊದಲ ಬಾರಿಗೆ ಪೂರ್ಣ ರಾಜ್ಯವನ್ನು ಕೇಂದ್ರಾಡಳಿತಕ್ಕೆ ಪರಿವರ್ತಿಸಿದ ಕೃತ್ಯವಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ. ಆದರೂ, ಈ ಕೃತ್ಯವು ಸಂವಿಧಾನದ 368ನೇ ವಿಧಿಯನ್ನು ಉಲ್ಲಂಘನೆ ಮಾಡಿದೆ ಎಂದು ಅವರು ಆರೋಪಿಸಿದರು.

ರಾಜ್ಯಗಳು ಯಾವುದಕ್ಕೆ, ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಕಳೆದುಕೊಂಡಿವೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಸಂಭವಿಸಿತ್ತು. ಈ ನಷ್ಟವನ್ನು ಸರಿದೂಗಿಸಲು ರಾಜ್ಯ ಸರಕಾರ ಸೆಸ್ ಏರಿಕೆ ಮಾಡಲು ಮುಂದಾಗಿತ್ತು. ಆದರೆ ಕೇಂದ್ರವು ಅನುಮತಿಯನ್ನು ನಿರಾಕರಿಸಿ, ಮಾನವೀಯ ಸಂಕಷ್ಟಕ್ಕೆ ಕಾರಣವಾಯಿತು. ಇದೆಲ್ಲದರ ನಡುವೆಯೂ ಕೇಂದ್ರ ಸರಕಾರ ಜಾರಿ ಮಾಡಿದ ಜಿಎಸ್‍ಟಿ ವ್ಯವಸ್ಥೆಯು ರಾಜ್ಯಗಳ ಸ್ವಾಯತ್ತತೆಯನ್ನೇ ಧ್ವಂಸ ಮಾಡಿದೆ ಎಂದು ಅವರು ಹೇಳಿದರು.

ನಮ್ಮ ಸಂವಿಧಾನವು ಸಮಾಜವಾದಿ ದಾಖಲೆಯಾಗಿದ್ದು, ಸಂವಿಧಾನದ ಮೌಲ್ಯಗಳಾದ ಘನತೆ, ಸಹೋದರತೆ, ಬಹುತ್ವಗಳ ನಂಬಿಕೆಯನ್ನು ಮರಳಿ ಮೂಡಿಸಬೇಕಾಗಿದೆ. ಇದನ್ನು ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಹಿರಿಯ ಸಮಾಜವಾದಿ ಚಿಂತಕ ಹಾಗೂ ಕೇರಳದ ಮಾಜಿ ಹಣಕಾಸು ಸಚಿವ ಪ್ರೊ. ಇಸಾಕ್ ಥಾಮಸ್, ತೆಲಂಗಾಣ ಶಾಸಕ ವಂಶಿಕೃಷ್ಣ, ಮಾಜಿ ಸಂಸದ ಥಂಪನ್ ಥಾಮಸ್, ಮಾಜಿ ಸಂಸದ ಎಲ್.ಹನುಮಂತಯ್ಯ, ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಸುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

‘ಮನರೇಗಾವನ್ನು ರದ್ದುಪಡಿಸಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರಲಾಗಿದೆ. ಕೇಂದ್ರ ಸರಕಾರವು ಗಾಂಧಿಯ ಆಲೋಚನೆಯನ್ನು ದಶಕಗಳಿಂದಲೇ ಕೊಲ್ಲುತ್ತಿದ್ದು, ಈಗ ಮಹಾತ್ಮಾ ಗಾಂಧಿಯ ಹೆಸರನ್ನೇ ತೆಗೆದುಹಾಕಿದೆ. ಅಲ್ಲದೆ ಈ ನೂತನ ಕಾಯ್ದೆಯಲ್ಲಿ ರಾಜ್ಯಗಳ ಮೇಲೆ ಶೇ.40ರಷ್ಟು ಹೊರೆ ಹೇರಲಾಗಿದೆ. ಆದರೆ ಯೋಜನೆಯನ್ನು ಎಲ್ಲಿ ಅನುಷ್ಠಾನ ಮಾಡಬೇಕು ಎಂಬುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಇದು ರಾಜ್ಯ ಸರಕಾರಗಳನ್ನು ಕಟ್ಟಿಹಾಕುವ ಹುನ್ನಾರವಾಗಿದೆ’

-ಸುದರ್ಶನ್ ರೆಡ್ಡಿ, ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News