×
Ad

ತೊಗರಿ ಮೌಲ್ಯವರ್ಧನೆ ಮೂಲಕ ರೈತರಿಗೆ ಹೆಚ್ಚಿನ ಬೆಲೆ : ಪ್ರಿಯಾಂಕ್ ಖರ್ಗೆ

Update: 2026-01-20 20:03 IST

ಬೆಂಗಳೂರು : ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಠ ತೊಗರಿಯನ್ನು ಬಳಸಿಕೊಂಡು ಮೌಲ್ಯವರ್ಧನೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿ, ರೈತರಿಗೆ ಹೆಚ್ಚಿನ ಬೆಲೆ ಒದಗಿಸಿಕೊಡಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತೊಗರಿ ಮೌಲ್ಯವರ್ಧನೆಗೆ ಬೇಕಾದ ಸಂಶೋಧನೆ, ತಾಂತ್ರಿಕ ನೆರವಿನ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಉಪಕ್ರಮಗಳನ್ನು ಕೈಗೊಳ್ಳಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷ ಸೈಯದ್ ಮಹಮೂದ್ ಚಿಸ್ತಿ (ಸಾಹೇಬ್) ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಚರ್ಚೆ ನಡೆಸಿದರು.

ಯಾವುದೇ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ವೃದ್ಧಿಸಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಕಾರ್ಯಕ್ರಮದಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆಯನ್ನೂ ಒದಗಿಸಬಹುದು ಹಾಗೂ ಈ ನಿಟ್ಟಿನಲ್ಲಿ ಸ್ಥಳೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ತೊಗರಿಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವ ಸಂಬಂಧ ಸಿದ್ಧಪಡಿಸಿದ ವರದಿಯನ್ನು ಪರಿಶೀಲಿಸಿದರು.

ತೊಗರಿ ಕಣಜ ಎಂದೇ ಹೆಸರು ವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯು ವಿಶಿಷ್ಠ ರುಚಿ, ವಿಭಿನ್ನ ಪರಿಮಳ ಮತ್ತು ದೀರ್ಘಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಾರಣದಿಂದಾಗಿ ಜಿಐ ಟ್ಯಾಗ್ ಅನ್ನು ಪಡೆದು ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಮತ್ತು ಹೆಗ್ಗುರುತನ್ನು ಪಡೆದಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News