×
Ad

ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2026-01-20 15:55 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ 'ಪ್ರಿಯಾಂಕ್ ಖರ್ಗೆ'ಯ ಹೆಸರೇ ಆಸರೆ!. ಅಪ್ರಸ್ತುತಗೊಳ್ಳುತ್ತಿದ್ದೇವೆ ಎನಿಸಿದಾಗ ಬಿಜೆಪಿಯ ಮಾಜಿ ಶಾಸಕರೊಬ್ಬರು ನನ್ನ ಹೆಸರು ಹಿಡಿದುಕೊಂಡು ಚಾಲ್ತಿಗೆ ಬರುವ ಪ್ರಯತ್ನ ನಡೆಸಿದ್ದಾರೆ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ಅನುದಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆ 'X'ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.

''ಪ್ರಜ್ಞೆ ಇಲ್ಲದವರ ತರ್ಕವಿಲ್ಲದ ಮಾತುಗಳಿಗೆ ಉತ್ತರ ನೀಡುವುದು ಸಮಯ ವ್ಯರ್ಥವೇ ಸರಿ, ಆದರೆ ಸಚಿವನಾಗಿ ಕುತರ್ಕಗಳಿಗೂ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿದೆ. ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿಯ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್ ನ್ನು ಮುಂದೆ ಇಟ್ಟುಕೊಂಡು ತರ್ಕವಿಲ್ಲದ, ಹುರುಳಿಲ್ಲದ, ಮತ್ತು ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡಿದ್ದಾರೆ, ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು, ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ'' ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು.

'' 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ.90ರಷ್ಟು ಜನಸಂಖ್ಯೆಯ ಆಧಾರದಲ್ಲಿ ಮತ್ತು ಶೇ.10ರಷ್ಟು ಭೌಗೋಳಿಕ ಆಧಾರದಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸುತ್ತೋಲೆ ಹಾಗೂ ಮಾರ್ಗಸೂಚಿಗಳ ಅನ್ವಯ ಬಿಡುಗಡೆ ಮಾಡಲಾಗುತ್ತದೆ, ಒಟ್ಟು ಅನುದಾನದಲ್ಲಿ ಶೇ.60 ನಿರ್ಬಂಧಿತ, ಶೇ.40 ಅನಿರ್ಬಂಧಿತ ಅನುದಾನವಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಅನುದಾನವನ್ನು ಗ್ರಾಮ ಪಂಚಾಯತ್ ಗಳು ಮಾರ್ಗಸೂಚಿ ಅನ್ವಯ ಗ್ರಾಮ ಸಭೆ ನಡೆಸಿ, ಕ್ರಿಯಾ ಯೋಜನೆ ತಯಾರಿಸಿಕೊಂಡು, ಗ್ರಾಮ ಪಂಚಾಯತ್ ಗಳ ಹಂತದಲ್ಲೇ ಕಾಮಗಾರಿ ಮಾಡಲಾಗುತ್ತದೆ, ಕ್ರಿಯಾ ಯೋಜನೆ ಮತ್ತು ಅನುಷ್ಠಾನದ ಮಾಹಿತಿಯನ್ನು ಇ- ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆಯೇ ಹೊರತು ಸರಕಾರದಿಂದ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ, ಸಂವಿಧಾನದ 73, 74 ತಿದ್ದುಪಡಿಯ ಮೂಲ ಆಶಯದಂತೆ ಸ್ಥಳೀಯವಾಗಿಯೇ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ. ಈ ಮೂಲಭೂತ ಪ್ರಜ್ಞೆ ಆರೋಪ ಮಾಡುವವರಿಗೆ ಇರಬೇಕಾಗಿದ್ದು ಅತ್ಯವಶ್ಯಕ'' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

"ಹೈಮಾಸ್ಕ್ ದೀಪಗಳನ್ನಾದರೂ ಹಾಕಬಹುದು, ಅಥವಾ ಇನ್ಯಾವುದೇ ಕಾಮಗಾರಿಗಳನ್ನಾದರೂ ಮಾಡಬಹುದು, ಅದು ಇದು ಸಂಪೂರ್ಣ ಗ್ರಾಮ ಪಂಚಾಯತ್ ಗಳ ವಿವೇಚನಾಧಿಕಾರ. 15ನೇ ಹಣಕಾಸು ಆಯೋಗದ ಅನುದಾನವನ್ನು ಬೇರೆಡೆ ವರ್ಗಾಯಿಸಲು ಸಾಧ್ಯವಿಲ್ಲ, ಈ ಅನುದಾನದ ಬಿಡುಗಡೆ ಮತ್ತು ಹಂಚಿಕೆಯಲ್ಲಿ ನನ್ನ ಪಾತ್ರ ಎಲ್ಲಿದೆ ಮತ್ತು ಹೇಗಿದೆ ಎನ್ನುವುದನ್ನು ದಾಖಲೆ ಸಮೇತ ನಿರೂಪಿಸಲು ಸಾಧ್ಯವಾಗದ ಮಾಜಿ ಶಾಸಕರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಅವರ ಗಾಳಿಯ ಗುಂಡು ಕೇವಲ ಶಬ್ದಕ್ಕಾಗಿ ಮಾತ್ರ! 15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಪಿ. ರಾಜೀವ್ ಹೇಳುವ ಮಾದರಿಯಲ್ಲಿ ಯಾವುದೇ ಆಕ್ಷೇಪಗಳು ಬಂದಿಲ್ಲ, ಹೀಗಿರುವಾಗ ಇವರ ಆರೋಪಕ್ಕೆ ಸಾಕ್ಷಿಗಳೇನು?" ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

2020-21ರಿಂದ 2022-23ರವರೆಗೆ, ಬಿಜೆಪಿ ಆಡಳಿತದ ಅವಧಿಯಲ್ಲಿ 65,325.36 ಲಕ್ಷ ರೂಪಾಯಿಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು, ಇದರಲ್ಲಿ 4,586.63 ಲಕ್ಷ ರೂಪಾಯಿಗಳ ವಸೂಲಾತಿಗೆ ಸೂಚಿಸಲಾಗಿತ್ತು, ಇದಕ್ಕೆ ಉತ್ತರ ಹೇಳುವವರು ಯಾರು? ಬಿಜೆಪಿ ಸರಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್ಲದೆ ಸೊರಗಿತ್ತು. ಇಡೀ ಇಲಾಖೆಯ ವ್ಯವಸ್ಥೆಯನ್ನು ಹಳ್ಳ ಹಿಡಿಸಲಾಗಿತ್ತು, ಬಿಜೆಪಿ ಮಾಡಿ ಹೋಗಿದ್ದ ಅವಾಂತರಗಳನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ, ಈ ನಡುವೆ ಇವರ ಸುಳ್ಳು ಆರೋಪಗಳನ್ನೂ ಸಹ ಸಮರ್ಥವಾಗಿ ಎದುರಿಸುತ್ತೇವೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News