×
Ad

ಹಿಜಾಬ್ ಮೇಲಿನ ನಿರ್ಬಂಧ ತೆರವು ಸ್ವಾಗತಾರ್ಹ : ಎಸ್‍ಐಒ

Update: 2026-05-14 18:42 IST

File Photo

ಬೆಂಗಳೂರು, ಮೇ 14 : ‘ರಾಜ್ಯ ಸರಕಾರವು ಹಿಜಾಬ್ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಂಡಿರುವ ನಿರ್ಧಾರವು ಅತ್ಯಂತ ಸ್ವಾಗತಾರ್ಹವಾದ ಹೆಜ್ಜೆಯಾಗಿದ್ದು, ಇದು ಸಂವಿಧಾನಾತ್ಮಕ ಮೌಲ್ಯ ಹಾಗೂ ನೈಜ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತದೆ’ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ(ಎಸ್‍ಐಓ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕುಗಳನ್ನು ಮರುಸ್ಥಾಪಿಸುವ ಮೂಲಕ, ಆಡಳಿತ ವರ್ಗವು ಸಮಾನತೆಯ ಮೇಲಿನ ತನ್ನ ದೃಢ ಬದ್ಧತೆಯನ್ನು ತೋರಿಸಿದೆ. ಯಾವುದೇ ವಿದ್ಯಾರ್ಥಿನಿ ತನ್ನ ಉಡುಪಿನ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ಯಾವುದೇ ಧರ್ಮಭೇದವಿಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನನ್ನು ಈ ವ್ಯವಸ್ಥೆಯ ಭಾಗವೆಂದು ಭಾವಿಸುವಂತೆ ಸಮಾನತೆಯ ಮತ್ತು ಒಳಗೊಳ್ಳುವಿಕೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ವಿದ್ಯಾರ್ಥಿನಿಯರ ಶಿಕ್ಷಣವನ್ನು ಮೊಟಕುಗೊಳಿಸುವ ಈ ಸಮಸ್ಯೆಯನ್ನು ನ್ಯಾಯಪರ ತೀರ್ಪಿನೊಂದಿಗೆ ಪರಿಹರಿಸಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಭವಿಷ್ಯದಲ್ಲಿ ವಿದ್ಯಾರ್ಥಿನಿಯರ ಅಮೂಲ್ಯವಾದ ಶೈಕ್ಷಣಿಕ ವರ್ಷಗಳು ಹಾನಿಯಾಗದಂತೆ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಆಡಳಿತದ ವಿಭಜನಾ ಮತ್ತು ದ್ವೇಷಪೂರಿತ ರಾಜಕಾರಣವು ತರಗತಿ ಕೊಠಡಿಗಳನ್ನೇ ರಾಜಕೀಯದ ವೇದಿಕೆಯನ್ನಾಗಿ ಮಾಡಿದ್ದು, ಶಿಕ್ಷಣ ಪಡೆದ ಮುಸ್ಲಿಮ್ ಮಹಿಳೆಯರ ಗೌರವವನ್ನು ಹಾನಿಗೊಳಿಸಿ ಅವರನ್ನು ಶಾಲೆಗಳಿಂದ ಹೊರಗುಳಿಸುವ ಹೊನ್ನಾರವನ್ನು ಸಹಿಸಲು ಸಾಧ್ಯವಿಲ್ಲ. ಆ ವಿಭಜನಾ ನೀತಿಯನ್ನು ದೃಢವಾಗಿ ಹಿಂತೆಗೆದುಕೊಳ್ಳುವ ಮೂಲಕ, ಪ್ರಸ್ತುತ ಸರಕಾರವು ಸಾಮುದಾಯಿಕ ಸೌಹಾರ್ದತೆಯೆಡೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹೆಣ್ಣುಮಕ್ಕಳ ಶಿಕ್ಷಣವು ಯಾವಾಗಲೂ ದ್ವೇಷದ ರಾಜಕಾರಣ ಮತ್ತು ಉಡುಪಿನ ವಿವಾದಗಳಿಗಿಂತ ಉನ್ನತವಾಗಿರಬೇಕು ಎಂಬುದನ್ನು ಇದು ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News