×
Ad

ಕೃಷಿ ಪದವೀಧರರು ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಉಳಿಯಬಾರದು : ಥಾವರ್ ಚಂದ್ ಗೆಹ್ಲೋಟ್

ಕೃಷಿ ವಿವಿ 60ನೇ ಘಟಿಕೋತ್ಸವ ಸಮಾರಂಭ

Update: 2026-05-14 20:04 IST

ಬೆಂಗಳೂರು, ಮೇ 14: ಕೃಷಿ ಪದವೀಧರರು ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೆ ಉದ್ಯೋಗ ಸೃಷ್ಟಿಕರ್ತರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಗ್ರಾಮೀಣ ಪರಿವರ್ತನೆಯ ನಾಯಕರಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

ಗುರುವಾರ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆದ ‘ಕೃಷಿ ವಿಶ್ವವಿದ್ಯಾನಿಲಯದ 60ನೇ ಘಟಿಕೋತ್ಸವ ಸಮಾರಂಭ’ದಲ್ಲಿ ಮಾತನಾಡಿದ ಅವರು, ಕೃಷಿಗೆ ಕೇವಲ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರಲ್ಲ, ದಾರ್ಶನಿಕ ಮತ್ತು ಸೂಕ್ಷ್ಮ ತಜ್ಞರ ಅಗತ್ಯವಿದೆ. ಹೀಗಾಗಿ ಕೃಷಿ ಪದವೀಧರರು ಭಾರತೀಯ ಕೃಷಿಗೆ ಶ್ರಮಿಸಬೇಕು. ಪ್ರಾಯೋಗಿಕ ಪರಿಹಾರಗಳು, ಸಂಪನ್ಮೂಲ ಸಂರಕ್ಷಣೆ ಮತ್ತು ಸುಧಾರಿತ ಜೀವನೋಪಾಯಕ್ಕಾಗಿ ರೈತರಿಗೆ ಸಹಕಾರ ನೀಡಬೇಕು ಎಂದರು.

ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಸಲುವಾಗಿ ಕೃಷಿಯಲ್ಲಿ ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅತಿಯಾದ ಬಳಕೆ ಮಡಲಾಗುತ್ತಿದೆ. ಇದರಿಂದ ಮಣ್ಣು, ನೀರು ಮತ್ತು ಪರಿಸರ ಕಲುಷಿತಗೊಳ್ಳುವ ಜೊತೆಗೆ ಮಾನವ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಅಗತ್ಯವೂ ಹೆಚ್ಚಾಗಿದೆ. ನೈಸರ್ಗಿಕ ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ತಪ್ಪಿಸಲಾಗುತ್ತದೆ. ಪ್ರಕೃತಿಯಲ್ಲಿ ಲಭ್ಯವಿರುವ ನೈಸರ್ಗಿಕ ಅಂಶಗಳನ್ನೇ ಕೀಟನಾಶಕ ಹಾಗೂ ಪೋಷಕಾಂಶಗಳಾಗಿ ಬಳಸುವ ಮೂಲಕ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ರಾಜ್ಯ ಸರಕಾರವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಸಂಸ್ಥೆಗಳ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ತಳಮಟ್ಟದ ರೈತರೊಂದಿಗೆ ನೇರ ಸಂಪರ್ಕ ಬೆಳೆಸಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವ ಜವಾಬ್ದಾರಿಯನ್ನೂ ಹೊಂದಿದ್ದಾರೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಾವು ಪಡೆದ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿ ಕೃಷಿಕ್ಷೇತ್ರದ ಸವಾಲುಗಳನ್ನು ಪರಿಷ್ಕರಿಸಿ, ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಮುಂದಾಗಬೇಕು. ಜೊತೆಗೆ, ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿ, ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವಕರು ಮಹತ್ವದ ಕೊಡುಗೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೆಶಕ ಡಾ. ಎಲ್.ಎಸ್. ಶಶಿಧರ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದ ಸಾಧನೆಯು ವಿಶೇಷವಾಗಿ ಗಮನಾರ್ಹವಾಗಿದ್ದು, ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಿದೆ. ಅಂತರರಾಷ್ಟ್ರೀಯಮಟ್ಟದ ಪರೀಕ್ಷೆಗಳು ಮತ್ತು ಪ್ರಸಿದ್ಧ ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಕೃಷಿ ಪದವೀಧರರ ಸಾಧನೆ ಅಪಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸೇವೆಗೈದ ಜಿ.ವಿ.ಕೆ. ನಾಯ್ಡು, ಶ್ರೀಕಂಠ, ಎಚ್.ಕೆ. ಅರವಿಂದ್ ಟಿ.ಎಂ. ಅವರಿಗೆ ಗೌರವ ಡಾಕ್ಡರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು. 1,115 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ. ಎಸ್.ವಿ. ಸುರೇಶ ಸೇರಿದಂತೆ ವಿವಿಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News