×
Ad

ಹಿಜಾಬ್ ಮೂಲಕ ಸಂಘರ್ಷಕ್ಕೆ ಎಡೆ: ಛಲವಾದಿ ನಾರಾಯಣಸ್ವಾಮಿ

Update: 2026-05-14 18:47 IST

ಬೆಂಗಳೂರು, ಮೇ 14: ನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಸರಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‍ಗೆ ಅವಕಾಶ ನೀಡಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಸಹೋದರತ್ವ ಇಲ್ಲದೆ ಇದ್ದರೆ ಸಮಾಜ ಉತ್ತಮವಾಗಿ ಬದುಕಲು ಸಾಧ್ಯವಿಲ್ಲ. ಆದುದರಿಂದ ನಾಲ್ಕು ವರ್ಷದ ಹಿಂದೆ ಶಾಲಾ-ಕಾಲೇಜುಗಳಲ್ಲಿ ತಲೆದೋರಿದ್ದ ಧಾರ್ಮಿಕ ಭಾವನೆ ಕೆರಳಿಸುವ ಹಿಜಾಬ್ ಅನ್ನು ನಿಷೇಧ ಮಾಡಲಾಗಿತ್ತು. ಸಮವಸ್ತ್ರ ಬಿಟ್ಟು ಬಹಿರಂಗವಾಗಿ ಮೇಲೆ ಕಾಣುವ ವಸ್ತ್ರ ಧರಿಸಬಾರದೆಂದು ತೀರ್ಮಾನ ಮಾಡಲಾಗಿತ್ತು ಎಂದರು.

ಹಿಜಾಬ್ ನಿಷೇಧ ಪ್ರಶ್ನಿಸಿ ಕೇಸ್ ಹಾಕಲಾಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ಇರುವಾಗಲೇ ರಾಜ್ಯ ಸರಕಾರ ತಕ್ಷಣಕ್ಕೆ ಒಂದು ಸಮುದಾಯ ಓಲೈಸಲು ಮತ್ತೆ ಹಿಜಾಬ್‍ಗೆ ಅವಕಾಶ ಕಲ್ಪಿಸಿ ಆದೇಶ ಮಾಡಿದೆ. ಇದು ದೊಡ್ಡ ತಪ್ಪು. ಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಆದೇಶ ಮಾಡಿರುವುದು ನ್ಯಾಯಾಂಗ ನಿಂದನೆ ಮಾಡಿದಂತೆ ಎಂದು ಅವರು ವಿಶ್ಲೇಷಿಸಿದರು.

ಹಿಜಾಬ್‍ಗೆ ಅವಕಾಶ ನೀಡಿದರೆ ಮುಸ್ಲಿಮರು ನಮ್ಮ ಜೊತೆಯಾಗುತ್ತಾರೆಂದು ಕಾಂಗ್ರೆಸ್ ಸರಕಾರ ತಿಳಿದಿದೆ. ಮುಸ್ಲಿಮರಿಗೆ ಹಣ ನೀಡಿದರೆ, ಮನೆ ಕೊಟ್ಟರೆ ಅವರೆಲ್ಲ ನಮ್ಮ ಜೊತೆಗೆ ನಿಲ್ಲುತ್ತಾರೆಂದು ಕಾಂಗ್ರೆಸ್ ಭಾವಿಸಿದೆ. ಇವೆಲ್ಲ ಬಹುಸಂಖ್ಯಾತರನ್ನು ಮುಸ್ಲಿಮರ ವಿರುದ್ಧವಾಗಿ ಎತ್ತಿಕಟ್ಟುವ ಕೆಲಸ. ಈ ರೀತಿ ಮಾಡಿ ಮುಸ್ಲಿಮರಿಗೆ ತೊಂದರೆ ಕೊಡುತ್ತಿದ್ದೀರಿ ಎಂಬುದು ನನ್ನ ಭಾವನೆ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸಲು ಹೋಗಿ ಬಹುಸಂಖ್ಯಾತರು ವಿರೋಧಿಗಳಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದ ಕಾನೂನು ಎಲ್ಲರಿಗೂ ಒಂದೇ. ಸಂವಿಧಾನದ ಅಡಿಯಲ್ಲಿ ಮುಸ್ಲಿಮ್, ಕ್ರೈಸ್ತ, ಬೌದ್ಧ ಎಲ್ಲರೂ ಒಂದೇ. ಪ್ರಧಾನಿ ಮೋದಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂದು ಹೇಳಿದ್ದು ಇದನ್ನೇ. ಕಾಂಗ್ರೆಸ್, ಬಿಜೆಪಿಯನ್ನು ಸನಾತನಿ ಎಂದು ಹೇಳುತ್ತದೆ. ಆದರೆ ನಾವು ದೇಶ ಒಡೆಯುವ ಯಾವುದೇ ಧಾರ್ಮಿಕ ವಿಚಾರ ಹೇಳಿಲ್ಲ. ಹಿಜಾಬ್ ನಂತಹ ತೀರ್ಮಾನ ಕೈಗೊಂಡು ರಾಜ್ಯಕ್ಕೇ ಬೆಂಕಿ ಹಚ್ಚುತ್ತಿದ್ದೀರಿ. ಇಲ್ಲಿ ಗದ್ದಲ ನಡೆದರೆ ಅದಕ್ಕೆ ಕಾಂಗ್ರೆಸ್ ಹೊಣೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News