‘ರಿಯಲ್ ಎಸ್ಟೇಟ್’ ರಾಜ್ಯ ಸರಕಾರದ ಕಾಯಕವಲ್ಲ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮೇ 14 : ರಿಯಲ್ ಎಸ್ಟೇಟ್ ಮಾಡುವುದು ರಾಜ್ಯ ಸರಕಾರದ ಕಾಯಕವಲ್ಲ. ಈ ಕೂಡಲೇ ರೈತರಿಗೆ ಬೇಡವಾಗಿರುವ ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜಿಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಜಮೀನು ನೀಡಲ್ಲ ಎಂದು ಬೀದಿಯಲ್ಲಿ ಕೂತಿದ್ದಾರೆ. ಆದರೆ, ರಾಜ್ಯ ಸರಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಕೋರರು ಭೂಮಿಯನ್ನು ಕಿತ್ತುಕೊಂಡು ವ್ಯವಹಾರ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಇದು ಯಾರಪ್ಪನ ಭೂಮಿ ಅವರು ಧಮ್ಕಿ ಹಾಕಿ ಕಿತ್ತುಕೊಳ್ಳುವುದಕ್ಕೆ ಎಂದು ಟೀಕಿಸಿದರು.
ಜನರ ಆಡಳಿತ ನಡೆಸಬೇಕಾದ ಈ ಸರಕಾರ ಮಧ್ಯವರ್ತಿ ಕೆಲಸ ಮಾಡಲು ಹೊರಟಿದೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಹೊರಟಿದೆ. ಚದರ ಅಡಿ ವ್ಯವಹಾರದಲ್ಲಿ ದಂಧೆ ಮಾಡಲು ಮುಂದಾಗಿದೆ ಎಂದ ಅವರು, ಎಂಟು ಹಳ್ಳಿಗಳ ರೈತರ ಅತ್ಯಂತ ಫಲವತ್ತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕೃಷಿ ಭೂಮಿಯನ್ನು ಲಪಟಾಯಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿರುವ ರಾಜ್ಯ ಸರಕಾರವು ನೇರವಾಗಿ ದಂಧೆಯಲ್ಲಿ ಮುಳುಗಿದೆ ಎಂದು ಅವರು ಆಪಾದಿಸಿದರು.
ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎನ್ನುವುತ್ತಿರುವ ರೈತರನ್ನು ಬೆದರಿಸಿ ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ. ಇಂತಹವರ ಬೆದರಿಕೆಯ ಆಟ ನಮ್ಮ ಮುಂದೆ ನಡೆಯುವುದಿಲ್ಲ. ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಯಾವ ರೈತರು ಕೂಡ ಭೂಮಿ ಬಿಟ್ಟುಕೊಡಲು ತಯಾರಿಲ್ಲ. ಅದು ಹೇಗೆ ಭೂಮಿ ವಶಪಡಿಸಿಕೊಳ್ಳುತ್ತಿರೋ ಬಂದು ವಶಪಡಿಸಿಕೊಳ್ಳಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ಕೊನೆಗಾಲದಲ್ಲಿ ಹೋಗಬೇಕಾದರೆ ಸಿದ್ದರಾಮಯ್ಯನವರೇ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ. ಹಲವಾರು ಭಾಗ್ಯ ಕೊಟ್ಟರೂ 2018ರಲ್ಲಿ 85 ಸ್ಥಾನಕ್ಕೆ ಇಳಿಸಿದರು ಜನರು. ಈ ರೀತಿಯ ಗ್ಯಾರಂಟಿ ಕೊಟ್ಟು ಜನ ಈಗ ಹೇಗೆ ಉಳಿಸುತ್ತಾರೆ ಎಂದು ಭಾವಿಸಬೇಡಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಟಿ.ಎ. ಜವರಾಯಗೌಡ, ಶಾಸಕಿ ಕರೆಮ್ಮ ನಾಯಕ, ಮಾಜಿ ಶಾಸಕ ಆರ್.ಮಂಜುನಾಥ್, ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ರಂಗನಾಥ್ ಸೇರಿದಂತೆ ಪ್ರಮುಖರಿದ್ದರು.