×
Ad

ಮಾವು, ಇತರೆ ಹಣ್ಣುಗಳ ಆನ್‍ಲೈನ್ ಮಾರಾಟಕ್ಕೆ ‘ರೈತರ ಅಂಚೆ ಸೇವೆ’ಗೆ ಚಾಲನೆ

Update: 2026-05-30 18:17 IST

ಬೆಂಗಳೂರು : ಹಾಪ್‍ಕಾಮ್ಸ್ ವತಿಯಿಂದ ಅಂಚೆ ಇಲಾಖೆ ಸಹಯೋಗದಲ್ಲಿ ಮಾವು ಹಾಗೂ ಇತರ ವಿಶೇಷ ಹಣ್ಣುಗಳನ್ನು ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ‘ರೈತರ ಅಂಚೆ’ ಎಂಬ ವಿನೂತನ ಆನ್‍ಲೈನ್ ವ್ಯಾಪಾರ ಸೇವೆಗೆ ಶನಿವಾರ ನಗರದ ಅಂಚೆ ಇಲಾಖೆ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಹಾಪ್‍ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ‘ಹಾಪ್‍ಕಾಮ್ಸ್‌ ಗೆ ಸುಧೀರ್ಘ ಇತಿಹಾಸವಿದೆ. ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಪಡೆದು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುವಲ್ಲಿ ಹಾಪ್‍ಕಾಮ್ಸ್ ಪ್ರಮುಖವಾಗಿದೆ. ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಎಲ್ಲ ಧಿಕ್ಕುಗಳಲ್ಲಿ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂಚೆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಹಾಪ್‍ಕಾಮ್ಸ್ ವತಿಯಿಂದ ವಸತಿ ಸಮುಚ್ಛಯಗಳಿಗೆ ಹೋಗಿ ಈಗಾಗಲೇ 1 ಕೋಟಿ ರೂಪಾಯಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ್ದೇವೆ. ಅದೇ ರೀತಿ ಅಂಚೆ ಇಲಾಖೆಯ ಸಹಾಯದಿಂದ 1 ಕೋಟಿ ರೂ. ಅಥವಾ ಕನಿಷ್ಠ 50ಲಕ್ಷ ರೂ. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಮುಖ್ಯ ವಲಯದ ಕ್ಷೇತ್ರ ಅಂಚೆ ಸೇವೆಗಳ ನಿರ್ದೇಶಕಿ ತಾರಾ.ವಿ, ಹಾಪ್‍ಕಾಮ್ಸ್ ಉಪಾಧ್ಯಕ್ಷ ನಾರಾಯಣಗೌಡ, ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ ಮತ್ತಿತರರು ಉಪಸ್ಥಿತರಿದ್ದರು.

 

ಮಾವು ಗ್ರಾಹಕರಿಗೆ ತಲುಪುವುದು ಹೇಗೆ?: ಅಂಚೆ ಇಲಾಖೆಯು ಮಾವು ಬೆಳೆಗಾರರೊಂದಿಗೆ ಬುಕ್‍ನೌ, ಪೇ ಲೇಟರ್ ಒಪ್ಪಂದದಡಿ ಪಾರ್ಸಲ್ ಸೇವೆಯನ್ನು ಒದಗಿಸುತ್ತಿದೆ. ಇದರಿಂದ ರೈತರಿಗೆ ಸೂಕ್ತ ಬೆಲೆ, ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ದೊರೆಯಲು ಅನುಕೂಲವಾಗಲಿದೆ. ರೈತರು ಆರ್ಡರ್ ಮಾಡಿದ ಗ್ರಾಹಕರ ಮಾವಿನ ಹಣ್ಣುಗಳ ಪಾರ್ಸಲ್‍ಗಳನ್ನು ಜಿಪಿಒಗೆ ಸಂಜೆ ವೇಳೆಗೆ ಕಲ್ಪಿಸುತ್ತಾರೆ. ನಂತರ ಅವುಗಳಿಗೆ ಬಾರ್ ಕೋಡ್ ಸ್ಟಿಕರ್ ಅಂಟಿಸಿ ಸ್ಪೀಡ್ ಪಾರ್ಸಲ್ ರೂಪದಲ್ಲಿ ಬುಕ್ಕಿಂಗ್ ಮಾಡಲಾಗುತ್ತದೆ. ಬುಕ್ ಆದ ನಂತರ ಅಂಚೆ ಕಚೇರಿಗಳಿಗೆ ಪಾರ್ಸಲ್ ರವಾನಿಸಲಾಗುತ್ತದೆ. ಮರು ದಿನ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ಅಂಚೆ ಇಲಾಖೆ ತಿಳಿಸಿದೆ.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News