"ದಯವಿಟ್ಟು ನಿಮ್ಮ ಹುದ್ದೆಯನ್ನೂ ರಕ್ಷಣಾ ಪಡೆಗಳಿಗೆ ಒಪ್ಪಿಸಿಬಿಡಿ. ಸಾಕು": ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಆಕ್ರೋಶ
ನೀಟ್ ಪರೀಕ್ಷೆಗೆ ವಾಯುಪಡೆ ನೆರವು ಕುರಿತ ವರದಿಗೆ ಟೀಕೆ
Update: 2026-05-30 17:48 IST
ಬೆಂಗಳೂರು : ‘ನೀಟ್’ ಪರೀಕ್ಷೆ ಅಕ್ರಮ ಮತ್ತು ಮರುಪರೀಕ್ಷೆಯ ಉಸ್ತುವಾರಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ನೀಟ್ ಮರು ಪರೀಕ್ಷೆಗೆ ಭಾರತೀಯ ವಾಯುಪಡೆಯ ನೆರವು ಪಡೆಯುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕಿಶೋರ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ "ನಾನು ಜೈವಿಕವಾಗಿ ಹುಟ್ಟಿದವನಲ್ಲ" (Non-Biological) ಎಂಬ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.
"ಮಿಸ್ಟರ್ ನಾನ್ ಬಯೋಲಾಜಿಕಲ್, ದಯವಿಟ್ಟು ನಿಮ್ಮ ಹುದ್ದೆಯನ್ನೂ ರಕ್ಷಣಾ ಪಡೆಗಳಿಗೆ ಒಪ್ಪಿಸಿಬಿಡಿ. ಸಾಕು" ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿನ ಸೋರಿಕೆ ತಡೆಯಲು ಮತ್ತು ಭದ್ರತೆಯನ್ನು ಹೆಚ್ಚಿಸಲು 1,000 ಕೋಟಿಗೂ ಅಧಿಕ ವೆಚ್ಚದಲ್ಲಿ ವಾಯುಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಧ್ಯಮ ವರದಿಯ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.