×
Ad

Bengaluru | ತರಗತಿ ನಡೆಯುತ್ತಿದ್ದ ವೇಳೆಯೇ ಶಾಲೆಯ ಕಟ್ಟಡದಲ್ಲಿ ಅಗ್ನಿ ಅವಘಡ: ತಪ್ಪಿದ ಅನಾಹುತ

Update: 2026-05-30 20:04 IST

ಸಾಂದರ್ಭಿಕ ಚಿತ್ರ | Image by muhammad.abdullah on Magnific

ಬೆಂಗಳೂರು : ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯ ಕಟ್ಟಡದಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಅಗ್ನಿ ಅವಘಡ ಸಂಭವಿಸಿರುವ ಘಟನೆ ಶನಿವಾರ ವರದಿಯಾಗಿದೆ.

ನಾಗದೇವಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯ 4ನೇ ಮಹಡಿಯಲ್ಲಿರುವ ಆಡಿಟೋರಿಯಂನಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಶಾಲೆಯ 9 ಮತ್ತು 10ನೇ ತರಗತಿಯ 55 ಮಂದಿ ವಿದ್ಯಾರ್ಥಿಗಳಿಗೆ ಶಾಲೆಯ ನೆಲಮಹಡಿಯ ತರಗತಿಗಳಲ್ಲಿ ಪಾಠ ನಡೆಯುತ್ತಿತ್ತು. ಶಾಲೆಗೆ ಬೆಂಕಿ ಹೊತ್ತಿಕೊಂಡಿರುವುದು ತಿಳಿಯುತ್ತಿದ್ದಂತೆ ಶಿಕ್ಷಕರು ತಕ್ಷಣ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಬಂದು ರಕ್ಷಿಸಿದ್ದಾರೆ.

ನಂತರ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದು ಮೂರು ಅಗ್ನಿ ಶಾಮಕ ವಾಹನದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಶಾಲೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಪೋಷಕರು ಆತಂಕದಿಂದ ಶಾಲೆ ಬಳಿ ದೌಡಾಯಿಸಿದ್ದರು. ತಮ್ಮ ಮಕ್ಕಳು ಸುರಕ್ಷಿತರಾಗಿರುವುದು ಕಂಡು ನಿಟ್ಟುಸಿರು ಬಿಟ್ಟರು.

ಈ ಸಂಬಂಧ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್‍ಸಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News