ಮಾಜಿ ಸಿಎಂ ದೇವರಾಜ ಅರಸು ಪುಣ್ಯಸ್ಮರಣೆ: ವಿಧಾನಸೌಧದಲ್ಲಿ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ
ಬೆಂಗಳೂರು : ಇಂದಿರಾಗಾಂಧಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಅರಸು ನಾಯಕತ್ವದಲ್ಲಿ ಉಳುವವನಿಗೆ ಭೂಮಿ ನೀಡಬೇಕು ಎಂದು ತಂದ ಭೂ ಸುಧಾರಣಾ ಕಾಯ್ದೆ ದೇಶಕ್ಕೆ ಒಂದು ಮಾದರಿ, ಅದೊಂದು ಕ್ರಾಂತಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅರಸು ಎಲ್ಲಾ ಜನಾಂಗದವರನ್ನು ಬೆಳೆಸಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಸಲು ಅವರು ಕ್ರಮ ಕೈಗೊಂಡರು. ಅವರೊಬ್ಬ ಧೀಮಂತ ನಾಯಕ. ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ದೇವರಾಜ ಅರಸು ಅವರು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜಿನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ. ಅಂದಿನ ಕಾಲದಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ ಅರಸು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ರೈತರು ಮಾತ್ರವಲ್ಲ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರ ಕೊಡುಗೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಎಲ್ಲಾ ನಾಯಕರಿಗೆ ನಮನ ಅರ್ಪಿಸಿದ್ದೆ, ಈಗ ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವ ಯು.ಟಿ.ಖಾದರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಉಪಸ್ಥಿತರಿದ್ದರು.