×
Ad

ಜರ್ಮನಿಯ ರೈನ್‍ಬಾನ್ ಎಜಿಯಿಂದ ಐದು ಜಿಟಿಟಿಸಿ ವಿದ್ಯಾರ್ಥಿಗಳ ಆಯ್ಕೆ : ಡಾ.ಶರಣಪ್ರಕಾಶ್ ಪಾಟೀಲ್

Update: 2026-06-06 20:53 IST

ಬೆಂಗಳೂರು, ಜೂ. 6: ಕರ್ನಾಟಕ ಮತ್ತು ಜರ್ಮನಿ ನಡುವೆ ಕೌಶಲ್ಯಪೂರ್ಣ ಸಹಕಾರ ಸಂಬಂಧ ವೃದ್ಧಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಐವರು ವಿದ್ಯಾರ್ಥಿಗಳನ್ನು ಜರ್ಮನಿಯ ಡಸೆಲ್ಡಾರ್ಫ್‍ನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ರೈನ್‍ಬಾನ್ ಎಜಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ.

ಪ್ರಸಕ್ತ ಸಾಲಿನ ಸೆಪ್ಟೆಂಬರ್‍ನಲ್ಲಿ ಆರಂಭವಾಗುವ ಜರ್ಮನ್ ಅಸ್‍ಬಿಲ್ಡಿಂಗ್(ದ್ವಿಮುಖ ವೃತ್ತಿಪರ ತರಬೇತಿ) ಕಾರ್ಯಕ್ರಮದಡಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿಕಾಸಸೌಧದಲ್ಲಿಂದು ನಡೆದ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈನ್‍ಬಾನ್ ಎಜಿ ನೀಡಿದ ಒಪ್ಪಿತ ಪತ್ರಗಳನ್ನು (ಎಲ್‍ಒಐ) ಐದೂ ಅಭ್ಯರ್ಥಿಗಳಿಗೆ ಹಸ್ತಾಂತರಿಸಿದರು.

ಜಾಗತಿಕವಾಗಿ ಮಾನ್ಯತೆ ಪಡೆದ ಜರ್ಮನ್ ವೃತ್ತಿಪರ ಶಿಕ್ಷಣ ಪದ್ಧತಿಯಾದ ಅಸ್‍ಬಿಲ್ಡಂಗ್, ರಚನಾತ್ಮಕ ತರಗತಿ ಬೋಧನೆ ಮತ್ತು ಪ್ರಾಯೋಗಿಕ ಕಾರ್ಯಸ್ಥಳ ತರಬೇತಿಯನ್ನು ಒದಗಿಸುತ್ತದೆ. ಅಂತರ್‍ರಾಷ್ಟ್ರೀಯ ಮಾನ್ಯತೆಯ ಪ್ರಮಾಣಪತ್ರವನ್ನೂ ನೀಡುತ್ತದೆ. ಈಗ ಆಯ್ಕೆಯಾದ ಜಿಟಿಟಿಸಿ ಅಭ್ಯರ್ಥಿಗಳು ಡಸೆಲ್ಡಾರ್ಫ್‍ನ ರೈನ್‍ಬಾನ್ ಎಜಿಯಲ್ಲಿ ತರಬೇತಿ ಪಡೆದು, ವಿಶ್ವ ದರ್ಜೆಯ ಕೈಗಾರಿಕಾ ಅನುಭವ ಮತ್ತು ಔಪಚಾರಿಕ ಜರ್ಮನ್ ಪ್ರಮಾಣೀಕರಣ ಪಡೆಯಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಇದು ರಾಜ್ಯಕ್ಕೆ ಹೆಮ್ಮೆಯ ಕ್ಷಣ. ನಮ್ಮ ಯುವಕರು ವಿಶ್ವದ ಅತ್ಯುತ್ತಮರೊಂದಿಗೆ ಸ್ಪರ್ಧಿಸುವ ಪ್ರತಿಭೆ ಮತ್ತು ಶಿಸ್ತನ್ನು ಹೊಂದಿದ್ದಾರೆ. ಇಂತಹ ಅಂತರ್‍ರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ಕೌಶಲ್ಯಪೂರ್ಣ ಯುವಕ-ಯುವತಿಯರಿಗೆ ಜಾಗತಿಕ ಅವಕಾಶಗಳನ್ನು ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ. ಇದು ಸುದೀರ್ಘ ಪ್ರಯಾಣದ ಆರಂಭ ಮಾತ್ರ ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಯಾದವ್ ಮಾತನಾಡಿ, ರೈನ್‍ಬಾನ್ ಎಜಿಯೊಂದಿಗಿನ ಸಹಯೋಗ ಕರ್ನಾಟಕದ ಕೌಶಲ್ಯಪೂರ್ಣ ಯುವಜನರಿಗೆ ಅರ್ಥಪೂರ್ಣ ಜಾಗತಿಕ ಉದ್ಯೋಗ ಮಾರ್ಗಗಳನ್ನು ತೆರೆಯುವಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದಾದ್ಯಂತ ಇನ್ನಷ್ಟು ಅಭ್ಯರ್ಥಿಗಳಿಗೆ ಈ ಮಾದರಿಯ ಪ್ರಯೋಜನ ತಲುಪಿಸಲು ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸೇರಿದಂತೆ ಹಲವರು ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News