ಅವಧಿ ವಿಸ್ತರಣೆ ಹಿಂಪಡೆಯಲು ಆಗ್ರಹ: ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ
ಬೆಂಗಳೂರು/ದೇವನಹಳ್ಳಿ : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಐತಿಹಾಸಿಕ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದ್ದರೂ, ರಾಜ್ಯ ಸರಕಾರ ಭೂಮಿ ನೀಡುವ ಅವಧಿಯನ್ನು ವಿಸ್ತರಿಸಿ, ಪರಿಹಾರದ ಹಣವನ್ನು ಹೆಚ್ಚು ಮಾಡುವ ಮೂಲಕ ರೈತರ ಸ್ವಾಭಿಮಾನವನ್ನು ಕಣ್ಮರೆಗೊಳಿಸಲು ಪ್ರಯತ್ನಿಸುತ್ತಿದೆ. ಕೂಡಲೇ ಸಚಿವ ಸಂಪುಟದ ಅವಧಿ ವಿಸ್ತರಣೆ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿದ ಪದಾಧಿಕಾರಿ ಕಾರಳ್ಳಿ ಶ್ರೀನಿವಾಸ್, ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮತ್ತು ರಾಜ್ಯದ ಎಲ್ಲ ರೈತಪರ ಸಂಘಟನೆಗಳ ಬೆಂಬಲದ ಫಲವಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸರಕಾರ ಭೂಸ್ವಾಧೀನದಿಂದ ಕೈಬಿಟ್ಟಿತ್ತು. ಆದರೆ ಇಂದಿಗೂ ಭೂಮಿ ನೀಡುವ ಅವಧಿ ವಿಸ್ತರಿಸುತ್ತಿರುವುದು ಖಂಡನೀಯ ಎಂದರು.
ಪದೇಪದೇ ಯಾವುದಾದರೊಂದು ರೂಪದಲ್ಲಿ ರೈತರ ಮೇಲೆ ಒತ್ತಡ ಹೇರುತ್ತಲೇ ಬಂದಿರುವ ಸರಕಾರ, ಸಂಪೂರ್ಣವಾಗಿ ಭೂಸ್ವಾಧೀನ ಕೈಬಿಡಲಾಗುವುದು ಎಂದು ಹೇಳುತ್ತಲೇ ‘ಸ್ವಇಚ್ಛೆಯಿಂದ ಭೂಮಿ ನೀಡುವವರಿಗೆ ಅವಕಾಶವಿದೆ’ ಎಂಬ ಕೊಕ್ಕೆ ಇಟ್ಟು ಆದೇಶ ಹೊರಡಿಸಿತ್ತು. ಇದರೊಂದಿಗೆ ಅಷ್ಟು ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸುವ ಮೂಲಕ ಕೃಷಿ ಹೊರತಾಗಿ ಬೇರೆ ಉದ್ದೇಶಕ್ಕೆ ಬಳಸದಂತೆ ರೈತರ ಭೂಮಿಯ ಹಕ್ಕುಗಳನ್ನು ಮೊಟಕುಗೊಳಿಸಿ ಆತಂಕ ಸೃಷ್ಟಿಸಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಸ್ವಇಚ್ಛೆಯಿಂದ ಭೂಮಿ ನೀಡುವರಿಗೆ ನೀಡಿದ್ದ ಗಡುವು ಮುಗಿದು ಎರಡು ತಿಂಗಳಾದರೂ, ಮತ್ತೆ ನಾಲ್ಕು ತಿಂಗಳು ಗಡುವು ವಿಸ್ತರಿಸಲಾಗಿದೆ. ಭೂಮಿ ಕೊಡಲು ಒಪ್ಪಿರುವ ರೈತರ ಭೂಮಿಗೆ ಹೆಚ್ಚಿನ ಪರಿಹಾರ ಹಣವನ್ನು ಶಿಫಾರಸು ಮಾಡುವ ಮೂಲಕ ಉಳಿದ ರೈತರಿಗೂ ಗಾಳ ಹಾಕಲು ಪ್ರಯತ್ನಿಸುತ್ತಿದೆ. ರೈತರ ಭೂಮಿಯನ್ನು ಬಲವಂತವಾಗಿ ಕಸಿಯಲು ಹಿಂಬಾಗಿಲಿನ ತಂತ್ರ ಅನುಸರಿಸುತ್ತಿದೆ. ಇಲ್ಲಿ ಯಾವ ಕುತಂತ್ರಗಳೂ ಫಲಿಸುವುದಿಲ್ಲ, ಸರಕಾರ ಕೂಡಲೇ ಅವಧಿ ವಿಸ್ತರಣೆ ತೀರ್ಮಾಣವನ್ನು ಹಿಂಪಡೆಯಬೇಕು ಎಂದು ಕಾರಳ್ಳಿ ಶ್ರೀನಿವಾಸ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಸುಬ್ರಮಣಿಗೌಡ, ಗೋಪಿನಾಥ್, ಪ್ರಮೋದ್, ದೇವರಾಜು, ಮನೇಗೌಡ, ವೆಂಕಟರಮಣಪ್ಪ, ವೆಂಕಟೇಶ್, ಪಿಳ್ಳಣ್ಣ, ಮೋಹನ್, ಸುರೇಶ್, ನಂದೀಶ್, ನಂದನ್, ವೆಂಕಟೇಶ್ ಗೌಡ, ಮುಕುಂದ, ಮಂಜುನಾಥ್ ಸೇರಿದಂತೆ ಹವಲವರು ಉಪಸ್ಥಿತರಿದ್ದರು.