×
Ad

Bengaluru | ಮಗಳೇ ಪೋಷಕರನ್ನು ಕೊಂದ ಪ್ರಕರಣ: ಪ್ರಿಯಕರ ಕೆನತ್‍ನನ್ನು ಬಂಧಿಸಿದ ಪೊಲೀಸರು

Update: 2026-06-26 19:37 IST

ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ಪ್ರೇಯಸಿಯ ಪೋಷಕರು ಹಾಗೂ ಆಕೆಯ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಕೆನತ್ ಬಂಧಿತ ಆರೋಪಿ.

ಶ್ವೇತಾ ಎಂಬುವವರು ತನ್ನ ಪ್ರಿಯಕರ ಕೆನತ್‍ನ ಜೊತೆಗೂಡಿ ಆಕೆಯ ತಂದೆ ಸೋಮಸುಂದರ್(52), ತಾಯಿ ಮುತ್ತುಲಕ್ಷ್ಮೀ(48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ(19) ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜೂ.22ರ ರಾತ್ರಿ ಸೀಗೇಹಳ್ಳಿಯಲ್ಲಿ ನಡೆದಿದ್ದು, ಈ ಬಗ್ಗೆ ಕೆ.ಆರ್.ಪುರ ಪೊಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರನ್ನು ಒಳಗೊಂಡ 10 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಯಾದ ಶ್ವೇತಾಗಳನ್ನು ಪುದುಚೇರಿಯಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ಪ್ರಕರಣದಲ್ಲಿ ಪ್ರಿಯಕರ ಕೆನತ್‍ನೊಂದಿಗೆ ಸೇರಿ ತನ್ನ ಮೂವರು ಕುಟುಂಬಸ್ಥರನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆತನ ಬಗ್ಗೆ ಸುಳಿವು ನೀಡಿದ್ದಳು.

ಲಭ್ಯವಿದ್ದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀವ್ರ ಶೋಧ ನಡೆಸಿ, ತಲೆಮರೆಸಿಕೊಂಡಿದ್ದ ಪ್ರಿಯಕರ ಕೆನತ್‍ನನ್ನು ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಬಂಧಿತ ಆರೋಪಿ ಕೆನತ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಪುದುಚೇರಿ ಪೊಲೀಸರ ಮೂರು ತಂಡಗಳು ನಮ್ಮೊಂದಿಗೆ ಕಾರ್ಯ ನಿರ್ವಹಿಸಿರುವುದು ಸಹಕಾರಿಯಾಗಿದೆ. ಇದೀಗ ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದು, ಅವರ ಹೇಳಿಕೆಗಳನ್ನು ಆಧರಿಸಿ ತನಿಖೆ ಮುಂದುವರೆಸಲಾಗುತ್ತದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ತನಿಖೆಯ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ರವಾನೆಯಾಗಬಾರದು. ತನಿಖೆಯ ನಂತರ ಕೃತ್ಯಕ್ಕೆ ಕಾರಣ ಮತ್ತಿತರ ಮಾಹಿತಿಗಳನ್ನು ನಾವೇ ಹಂಚಿಕೊಳ್ಳುತ್ತೇವೆ.

- ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News