Bengaluru | ಮರದ ಕೊಂಬೆ ಬಿದ್ದು ಬೈಕ್ ಸವಾರನಿಗೆ ಗಂಭೀರ ಗಾಯ: ಐಸಿಯುಗೆ ದಾಖಲು
Update: 2026-06-26 21:21 IST
ಬೆಂಗಳೂರು : ಹೆಲ್ಮೆಟ್ ಧರಿಸದೆ ಇಲ್ಲಿನ ರಾಜಾಜಿನಗರ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಒಣಗಿದ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಗಾಯಾಳು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಸತೀಶ್(52) ಎಂದು ಗುರುತಿಸಿದ್ದು, ಅವರು ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸತೀಶ್ ತಮ್ಮ ಬೈಕ್‍ನಲ್ಲಿ ಫೈನಾನ್ಸ್ ಹಣವನ್ನು ಸಂಗ್ರಹಿಸಲು ಹೋಗುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಒಣಗಿದ ಮರದಿಂದ ಬೃಹತ್ ಕೊಂಬೆಯೊಂದು ಅವರ ತಲೆ ಮೇಲೆಯೇ ಮುರಿದು ಬಿದ್ದಿದೆ. ತಕ್ಷಣವೇ ಬೈಕ್ ನಿಯಂತ್ರಣ ತಪ್ಪಿ ಅವರು ರಸ್ತೆಗೆ ಬಿದ್ದಿದ್ದಾರೆ.
ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಸತೀಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.