×
Ad

Bengaluru | ಮೆಟ್ರೋ ಪಿಲ್ಲರ್‌ಗಳಿಗೆ ದೀಪ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು

Update: 2026-06-26 21:26 IST

ಬೆಂಗಳೂರು : ಇಲ್ಲಿನ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಪಿಲ್ಲರ್‌ ಗಳಿಗೆ ದೀಪ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದ ವೇಳೆ ಗುತ್ತಿಗೆ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ದುರ್ಘಟನೆ ಶುಕ್ರವಾರ ಮಧ್ಯಾಹ್ನ 3:52ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.

ಮೆಟ್ರೋ ಪಿಲ್ಲರ್‍ಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಸಂಸ್ಥೆಯ ಗುತ್ತಿಗೆ ಕಾರ್ಮಿಕರೊಬ್ಬರು ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ.

ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಕಾರ್ಮಿಕನನ್ನು ಸಹೋದ್ಯೋಗಿಗಳು ಮತ್ತು ಮೆಟ್ರೋ ಸಿಬ್ಬಂದಿ ತಕ್ಷಣವೇ ಹತ್ತಿರದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕಾರ್ಮಿಕ ಮರಣ ಹೊಂದಿದ್ದಾನೆ.

ಮೆಟ್ರೋ ಕಾಮಗಾರಿ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಲೋಪವಾಗಿದೆಯೇ ಅಥವಾ ಅರ್ಥ್ ಪಿಟ್ ತೆಗೆಯುವಾಗ ಬೇರೆ ಯಾವುದಾದರೂ ಕಾರಣದಿಂದ ವಿದ್ಯುತ್ ಪ್ರವಹಿಸಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News