‘ಕೆಪಿಎಸ್‍ಸಿ: ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಅಕ್ರಮ ಆರೋಪ’ : ಸಿಬಿಐ ತನಿಖೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ

Update: 2026-08-02 23:25 IST

ಅಮಿತ್‌ ಶಾ(PTI)/ಶೋಭಾ ಕರಂದ್ಲಾಜೆ

ಬೆಂಗಳೂರು : ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಗಂಭೀರ ಅಕ್ರಮಗಳ ಕುರಿತು ಸಿಬಿಐಯಿಂದ ಸ್ವತಂತ್ರ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವಿವಾರ ಪತ್ರ ಬರೆದಿದ್ದಾರೆ.

ಕೆಪಿಎಸ್‍ಸಿ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹಸ್ತಕ್ಷೇಪ ಹಾಗೂ ಕ್ರಿಮಿನಲ್ ಸಂಚು ನಡೆದಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಇಂತಹ ಆರೋಪಗಳು ಸರಕಾರಿ ನೇಮಕಾತಿ ನಡೆಸುವ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುವಂತಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಕ್ರಮಗಳ ಸ್ವರೂಪವು ವ್ಯಾಪಕ ಪ್ರಮಾಣದಲ್ಲಿದ್ದು, ಅಕ್ರಮ ಹಣಕಾಸು ವ್ಯವಹಾರ ನಡೆದಿರುವ ಸಾಧ್ಯತೆ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡಿರುವ ಆರೋಪಗಳು ವ್ಯಕ್ತವಾಗಿವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೊಲಪಡಿಸದಿದ್ದರೆ ಸರಕಾರಿ ಉದ್ಯೋಗ ನೇಮಕಾತಿಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಮೇಲಿನ ಜನರ ನಂಬಿಕೆಗೆ ಗಂಭೀರ ಹೊಡೆತ ಬೀಳಲಿದೆ ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು, ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಪತ್ತೆ ಹಚ್ಚಲು, ಅಕ್ರಮ ಹಣದ ವ್ಯವಹಾರವನ್ನು ಪತ್ತೆಹಚ್ಚಲು ಹಾಗೂ ಸರಕಾರಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರವನ್ನು ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಆದುದರಿಂದ, ಕೆಪಿಎಸ್‍ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಗಳ ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News