ಡಿಲೀಟ್ ಆದ ಮತಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದು ಸೂಕ್ತ : ಪ್ರಶಾಂತ್ ಭೂಷಣ್

Update: 2026-08-02 23:57 IST

ಬೆಂಗಳೂರು : ಎಸ್‌ಐಆರ್‌ನಲ್ಲಿ ಅಳವಡಿಸಲಾದ ಲಾಜಿಕಲ್ ಡಿಸ್ಕ್ರಿಪೆನ್ಸಿ ಪ್ರಕಾರ ಕರ್ನಾಟಕದಲ್ಲಿ ಸುಮಾರು 1 ಕೋಟಿಗೂ ಅಧಿಕ ಮತದಾರರು ಮತದ ಹಕ್ಕನ್ನು ಕಳೆದುಕೊಳ್ಳುವ ಆತಂಕವಿದೆ. ಇದೊಂದು ದೊಡ್ಡ ದುರಂತ. ಈ ಬಗ್ಗೆ ಹೈಕೋರ್ಟ್‌ನಲ್ಲೇ ಕಾನೂನು ಹೋರಾಟ ಮಾಡಬಹುದು, ಆದರೆ, ಸುಪ್ರೀಂ ಕೋರ್ಟ್‌ಗೆ ಹೋಗುವುದು ಸೂಕ್ತ ಎನ್ನಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

ರವಿವಾರ ನಗರದ ಶಾಸಕರ ಭವನದಲ್ಲಿ ನಡೆದ ‘ಎಸ್‌ಐಆರ್ ಹಾಗೂ ನಮ್ಮ ಮುಂದಿರುವ ಕಾನೂನಾತ್ಮಕ ಸವಾಲುಗಳು’ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಅಭಿಪ್ರಾಯದಲ್ಲಿ ಮನೆ ಮನೆಗೆ ತೆರಳಿ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಅರ್ಜಿ ಹಂಚುವ ಅಗತ್ಯವಿರಲಿಲ್ಲ ಎಂದರು.

ಎನ್ಯುಮರೇಷನ್ ಫಾರಂ ತುಂಬುವವರು ಕೆಲವು ದಾಖಲೆಯನ್ನು ನೀಡಬೇಕಾಗಿದೆ. ಒಮ್ಮೆ ಅರ್ಜಿ ತುಂಬಿ ಸಹಿ ಮಾಡಿದರೆ ನೀವು ಸ್ವಘೋಷಣೆ ಅನ್ನು ಮಾಡಿದಂತೆ. ಮುಂದೆ ತಕರಾರು ಬಂದಲ್ಲಿ ನೀವು ಅರ್ಹ ಮತದಾರರು ಅಲ್ಲ ಎಂಬ ತೀರ್ಮಾನವನ್ನು ಮಾಡಬಹುದಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ತನ್ನ ಮ್ಯಾನುಯಲ್‌ನಲ್ಲಿ ಇರುವುದನ್ನೇ ಸರಿಯಾಗಿ ಮಾಡುತ್ತಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.

ನಮ್ಮ ದೇಶದಲ್ಲಿ ಅಕ್ಷರಗಳು(ಸ್ಪೆಲ್ಲಿಂಗ್) ತಪ್ಪಾಗುವುದು ಸಹಜ. ಆದರೆ, ಅದರ ಆಧಾರದ ಮೇಲೆ ಹೆಸರುಗಳನ್ನು ಡಿಲೀಟ್ ಮಾಡಿಬಿಡುತ್ತಿರಾ? ಕೇವಲ ಜನರ ಹೆಸರು, ವಯಸ್ಸು, ವಿಳಾಸ ತಪ್ಪಾಗಿದ್ದರೆ ಹೇಗೆ ಡಿಲೀಟ್ ಮಾಡುತ್ತೀರಿ ಎಂದು ನಾವು ಕೇಳಬೇಕಾದ ಸಮಯ ಬಂದಿದೆ. ನಮ್ಮ ದನಿಗೆ ಶಕ್ತಿ ಬೇಕು ಅಂದಾಗ ಬೀದಿಯಲ್ಲಿ ಹೋರಾಟ ಆಗುವುದು ಬಹಳ ಮುಖ್ಯ. ನಮ್ಮ ದನಿಗೆ ಶಕ್ತಿ ಬರುವುದು ಜನ ಹೋರಾಟದಿಂದ. ಈ ಬಗ್ಗೆ ನಾವು ಕಾನೂನು ಹೋರಾಟವನ್ನೂ ಮಾಡಲೇಬೇಕು ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.

ಸಂವಾದದಲ್ಲಿ ಹಲವರು ಕೇಳಿದ ಪ್ರಶ್ನೆಗಳಿಗೆ ಪ್ರಶಾಂತ್ ಭೂಷಣ್ ಕಾನೂನು ಸಲಹೆಗಳ ಮೂಲಕ ಉತ್ತರಿಸಿದರು.

ಜನರಿಗೆ ಯಾಕೆ ನಿಮ್ಮ ಹೆಸರನ್ನು ಡಿಲೀಟ್ ಮಾಡುತ್ತಿದ್ದೇವೆ ಎಂದು ಸರಿಯಾಗಿ ಹೇಳುತ್ತಿಲ್ಲ. ಈವರೆಗೂ ಡಿಲೀಟ್ ಮಾಡಿರುವುದೆಲ್ಲ ನನ್ನ ಪ್ರಕಾರ ಬೋಗಸ್ ಆಗಿದೆ. ಏಕೆಂದರೆ, ಕೇವಲ ಸ್ಪೆಲ್ಲಿಂಗ್ ತಪ್ಪಾದರೆ, ವಯಸ್ಸು ತಪ್ಪಾದರೆ ಅದರ ಆಧಾರದ ಮೇಲೆ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಮತದಾರರನ್ನು ಡಿಲೀಟ್ ಮಾಡುವುದು ಸರಿಯಾಗಿಲ್ಲ. ಈಗ ಡಿಲೀಟ್ ಆಗಿರುವುದಲ್ಲಿ 3ನೇ 2 ಭಾಗ ಮುಸ್ಲಿಮರು ಇದ್ದಾರೆ. ಇದು ಹೇಗೆ ಆಗುತ್ತದೆ? ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News