ರೈಲ್ವೆ ಜಾಲತಾಣಗಳಲ್ಲಿ ಕನ್ನಡಕ್ಕೂ ಸ್ಥಾನ ನೀಡಿ : ಡಾ.ಪುರುಷೋತ್ತಮ ಬಿಳಿಮಲೆ

Update: 2026-08-08 19:45 IST

ಬೆಂಗಳೂರು : ರೈಲ್ವೆ ಸಚಿವಾಲಯವು ದೇಶದ ವಿವಿಧ ರೈಲ್ವೆ ವಲಯಗಳ ಜಾಲತಾಣಗಳನ್ನು ಇಂಗ್ಲಿಷ್‌ ಜೊತೆಯಲ್ಲಿ ಹಿಂದಿಯಲ್ಲಿಯೂ ಆರಂಭಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಕನ್ನಡ ಸೇರಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೂ ಸಮಾನ ಆದ್ಯತೆ ನೀಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಶನಿವಾರ ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಅವರು, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಬಹುಭಾಷಿಕ ಪರಂಪರೆಗೆ ಅನುಗುಣವಾಗಿ ರಾಜ್ಯಗಳ ಅಧಿಕೃತ ಭಾಷೆಗಳಿಗೂ ರೈಲ್ವೆ ಜಾಲತಾಣಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.

ಕರ್ನಾಟಕದಂತಹ ಕನ್ನಡ ಭಾಷಿಕ ರಾಜ್ಯಗಳಲ್ಲಿ ರೈಲ್ವೆ ಸೇವೆಗಳನ್ನು ಬಳಸುವ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ ಕನ್ನಡದಲ್ಲಿಯೂ ಜಾಲತಾಣ ಸೇವೆಗಳನ್ನು ಒದಗಿಸುವುದು ಅಗತ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ದೊರೆಯುವುದಲ್ಲದೇ, ಇದು ಆಡಳಿತದಲ್ಲಿ ಭಾಷಾ ಸಮಾನತೆಯನ್ನು ಸಾಧಿಸಲು ಉತ್ತೇಜಿಸಲಿದೆ ಎಂದಿದ್ದಾರೆ.

ಭಾರತದ ಭಾಷಾ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಜೊತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿಯೂ ರೈಲ್ವೆ ಜಾಲತಾಣಗಳನ್ನು ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News