ಮಹಿಳೆಯರಿಗೆ ತಕ್ಷಣವೇ ಕಾನೂನಿನ ನೆರವು ಸಿಗಬೇಕು : ನ್ಯಾ.ನಾಗರತ್ನ
ನ್ಯಾ.ಬಿ.ವಿ.ನಾಗರತ್ನ (Photo: PTI)
ಬೆಂಗಳೂರು : ಮಹಿಳೆಯರಿಗೆ ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯದ ಘಟನೆ ಸಂಭವಿಸಿದ ತಕ್ಷಣವೇ ಅವರಿಗೆ ಕಾನೂನು ನೆರವು ದೊರೆಯಬೇಕು ಎಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಹೇಳಿದ್ದಾರೆ.
ಶನಿವಾರ ನಗರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು, ಹೈಕೋರ್ಟ್ ಮತ್ತು ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ‘ಮಹಿಳೆಯರಿಗೆ ನ್ಯಾಯ’ ವಿಷಯ ಕುರಿತ ದಕ್ಷಿಣ ವಲಯ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಘಟನೆ ನಡೆದ ತಕ್ಷಣವೇ ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕಾನೂನು ನೆರವು ದೊರೆಯುವ ವ್ಯವಸ್ಥೆ ಇರಬೇಕು ಎಂದು ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳಿಂದ ತಾಲೂಕು ಮಟ್ಟದ ವರೆಗೆ ಇರುವ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮೀಣ ಸರಕಾರಿ ಆಸ್ಪತ್ರೆಗಳು ಮತ್ತು ಪೊಲೀಸ್ ಠಾಣೆಗಳ ನಡುವೆ ಸಮನ್ವಯ ಕಲ್ಪಿಸುವ ಸುಸಂಘಟಿತ ವ್ಯವಸ್ಥೆ ರೂಪಿಸಬೇಕು. ಕಾನೂನು ನೆರವು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸುವ ಬದಲು, ಆ ನೆರವಿನಿಂದ ದೊರೆತ ಪರಿಣಾಮ ಮತ್ತು ಫಲಿತಾಂಶದ ಆಧಾರದ ಮೇಲೆ ಅದರ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮಹಿಳೆಯರಿಗೆ ತ್ವರಿತ ಪರಿಹಾರ ಒದಗಿಸಲು ಪ್ಯಾರಾಲೀಗಲ್ ಸ್ವಯಂ ಸೇವಕರು ಕಡಿಮೆ ಸಮಯದಲ್ಲಿ ಲಭ್ಯವಾಗುವಂತಿರಬೇಕು. 2025ರ ಎಪ್ರಿಲ್‍ನಿಂದ 2026ರ ಮಾರ್ಚ್ ವರೆಗೆ 4,14,795 ಮಹಿಳೆಯರು ಕಾನೂನು ನೆರವು ಪಡೆದಿದ್ದಾರೆ. ಇದು ಶ್ಲಾಘನೀಯ ಸಾಧನೆ. ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷೆಯಾಗಿ, ಹೈಕೋರ್ಟ್‍ನಲ್ಲಿ ಕಾನೂನು ನೆರವಿನ ಮೂಲಕ ಪ್ರಕರಣವೊಂದು ಇತ್ಯರ್ಥವಾದಾಗ ಅದರ ಮಾಹಿತಿ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಗೆ ಕಳುಹಿಸಬೇಕು. ಸೋತ ಪಕ್ಷ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಬಯಸಿದರೆ, ಈ ಮುನ್ನೆಚ್ಚರಿಕೆಯ ಮಾಹಿತಿ ನೆರವಾಗಲಿದೆ ಎಂದು ನಾಗರತ್ನ ಹೇಳಿದರು.
ಅಧಿಕಾರ ಮೊಟಕಿಗೆ ಆಕ್ಷೇಪ: ಕರ್ನಾಟಕ ಸಿವಿಲ್ ಕೋರ್ಟ್‍ಗಳ ತಿದ್ದುಪಡಿ ಕಾಯ್ದೆ-2023 ಮತ್ತು ಕರ್ನಾಟಕ ಹೈಕೋರ್ಟ್ ತಿದ್ದುಪಡಿ ಕಾಯ್ದೆ-2023ರ ಇತ್ತೀಚಿನ ತಿದ್ದುಪಡಿಗಳಿಂದ ನಿಯಮಿತ ಮೊದಲ ಮೇಲನವಿಗಳನ್ನು ವಿಚಾರಿಸುವ ಹೈಕೋರ್ಟ್‍ನ ಅಧಿಕಾರ ಮೊಟಕುಗೊಂಡಿದೆ. ತಿದ್ದುಪಡಿಯಿಂದ ಸಿವಿಲ್ ನ್ಯಾಯಾಧೀಶರು(ಹಿರಿಯ ವಿಭಾಗ)ನೀಡುವ ತೀರ್ಪು ಮತ್ತು ಡಿಕ್ರಿ ವಿರುದ್ಧ ಮೇಲ್ಮನವಿ ಹೈಕೋರ್ಟ್ ಬದಲಿಗೆ ಜಿಲ್ಲಾ ಕೋರ್ಟ್‍ನಲ್ಲಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಮೇಲ್ಕಂಡ ತಿದ್ದುಪಡಿ ರದ್ದು ಮಾಡಬೇಕು ಎಂದು ಅವರು ಹೇಳಿದರು.