ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು ಪ್ರಕರಣ: ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಘೋಷಿಸಿದ ಮುಖ್ಯಮಂತ್ರಿ
ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಆಟೊರಿಕ್ಷಾ ಢಿಕ್ಕಿ ಹೊಡೆದು ಇತ್ತೀಚಿಗೆ ಮೃತಪಟ್ಟಿದ್ದ ವಿದ್ಯಾರ್ಥಿನಿ ಮಾನಸ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಶನಿವಾರ ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3ಲಕ್ಷ ರೂ. ಹಾಗೂ ಚಿಕಿತ್ಸಾ ವೆಚ್ಚವಾಗಿ ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ 7ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ.ವಿದ್ಯಾರ್ಥಿನಿಯ ಪೋಷಕರಿಗೆ ನೀಡಲಾಗಿದೆ ಎಂದರು.
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಾನಸ (23) ಅವರು ಬೆಂಗಳೂರು ವಿವಿಯ ದೃಶ್ಯ ಕಲಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಜು.30ರಂದು ಜ್ಞಾನಭಾರತಿ ಕ್ಯಾಂಪಸ್‍ನ ಗಾಂಧಿ ಮಾರ್ಗದ ಕ್ಯಾಂಟಿನ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಆಟೊರಿಕ್ಷಾ ಮಾನಸ ಅವರಿಗೆ ಢಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ವಿದ್ಯಾರ್ಥಿನಿಯ ನಿಧನಕ್ಕೆ ಸಂತಾಪ ಸೂಚಿಸಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಪರಿಹಾರ ಒದಗಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.