ಉರ್ದು ಮಾಧ್ಯಮ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಿ : ಬಲ್ಕೀಸ್ ಬಾನು
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಹೊರಡಿಸಿರುವ ಅಧಿಸೂಚನೆಯನ್ನು ತಡೆ ಹಿಡಿಯುವಂತೆ ಆಗ್ರಹಿಸಿರುವ ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಉರ್ದು ಮಾಧ್ಯಮದ ಭಾಷಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ತಮಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಬಲ್ಕೀಸ್ ಬಾನು ಪತ್ರ ಬರೆದಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಪರೀಕ್ಷೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಲ್ಕೀಸ್ ಬಾನು ತಿಳಿಸಿದ್ದಾರೆ.
ಉರ್ದು ಮಾಧ್ಯಮದ ಭಾಷಾ ಶಿಕ್ಷಕರು ಹಾಗೂ ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಕುರಿತು ಈ ಅಧಿಸೂಚನೆಯಲ್ಲಿ ತಿಳಿಸಿಲ್ಲ. ಆದುದರಿಂದ, ಕೂಡಲೆ ಸರಕಾರವು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ, ಶಿಕ್ಷಕರ ಪರೀಕ್ಷೆಯನ್ನು ಉರ್ದು ಮಾಧ್ಯಮದಲ್ಲಿ ನಡೆಸಲು ಹಾಗೂ ಉರ್ದು ಮಾಧ್ಯಮದ ಭಾಷಾ ಶಿಕ್ಷಕರು ಹಾಗೂ ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಕುರಿತು ಅಗತ್ಯ ಕ್ರಮ ವಹಿಸಬೇಕು ಎಂದು ಬಲ್ಕೀಸ್ ಬಾನು ಮನವಿ ಮಾಡಿದ್ದಾರೆ.