ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ʼಶುದ್ಧೀಕರಣ' : ದಸಂಸ ಆಕ್ರೋಶ
ಮಲ್ಲಿಕಾರ್ಜುನ ಖರ್ಗೆ (File Photo: PTI)
ಬೆಂಗಳೂರು : ದಲಿತ ವಿರೋಧಿ ಆರೆಸ್ಸೆಸ್-ಬಿಜೆಪಿಯ ಮನುವಾದಿಗಳು ಸಂವಿಧಾನವನ್ನು ಬದಲಿಸುವ ಹುನ್ನಾರದ ಹಿನ್ನೆಲೆಯಲ್ಲೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣದ ಮೂಲಕ ದಲಿತರನ್ನು ಅವಮಾನಿಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ದಸಂಸ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ ಈ ಸಂಬಂಧ ದಸಂಸ ಸಂಚಾಲಕರಾದ ಎಂ.ಶಿವಲಿಂಗಯ್ಯ, ಗಂಗ ನಂಜಯ್ಯ, ಶ್ರೀನಿವಾಸ್, ಸೈಯದ್ ಮುಕ್ತಾರ್, ಬಾಲರಾಜು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ರಾಷ್ಟ್ರದಲ್ಲಿರುವ 50 ಕೋಟಿಗೂ ಹೆಚ್ಚಿರುವ ದಲಿತ ಸಮುದಾಯವು ಸಂವಿಧಾನವನ್ನು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ನಂತರ ಬಿಜೆಪಿ ಆರೆಸ್ಸೆಸ್ ಮನುವಾದಿ ಬೆಂಬಲಿಗರು ಮೈದಾನವನ್ನು ‘ಶುದ್ದೀಕರಿಸಲು’ ಹವನ ನಡೆಸಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.