×
Ad

ಕರ್ನಾಟಕದಲ್ಲಿ ಚೀನಾ ಉದ್ಯಮಿಯಿಂದ 100 ಕೋಟಿ ಹೂಡಿಕೆ

Update: 2025-08-02 00:06 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಚೀನಾದ ಜವಳಿ ಉದ್ಯಮಿ ಪಾಲ್ ಪು ಅವರು ರಾಜ್ಯದಲ್ಲಿ 100 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಶುಕ್ರವಾರ ಕರ್ನಾಟಕ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಚರ್ಚಿಸಿದ ಪಾಲ್ ಪು, ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಯೋಜನಾ ಸ್ಥಳ ಅಂತಿಮಗೊಳಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ತಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಇರುವ ಭೂಮಿ ಲಭ್ಯವಿದೆ. ವರ್ಷದಲ್ಲಿ 365 ದಿನ ನೀರು, ಸಮರ್ಪಕ ವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಸೌಲಭ್ಯ ಇರುವ ಕಡೆ ಅಗತ್ಯ ಪ್ರಮಾಣದ ಭೂಮಿ ಒದಗಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಸಚಿವರ ಸಲಹೆಗೆ ಸಮ್ಮತಿಸಿದ ಉದ್ಯಮಿ, ಮೊದಲ ಹಂತದಲ್ಲಿ ಹಳೆಯ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲೂ ಉದ್ಯಮ ಸ್ಥಾಪನೆ ನಿಶ್ಚಿತ ಎಂದು ಅವರು ಉಲ್ಲೇಖಿಸಿದ್ದಾರೆ.

ಮೊದಲ ಹಂತದ ಯೋಜನೆಯಲ್ಲಿ 100 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ಐದು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ತಕ್ಷಣವೇ ಬಂಡವಾಳ ಹೂಡಲು ಸಿದ್ಧರಿದ್ದು, 20 ಎಕರೆ ಭೂಮಿಯ ಅಗತ್ಯವಿದ್ದು, ರಾಜ್ಯ ಸರಕಾರದಿಂದ ಅಗತ್ಯ ಸಹಕಾರ ನಿರೀಕ್ಷೆ ಹೊಂದಿದ್ದೇನೆ ಎಂದು ಪಾಲ್ ಪು ಹೇಳಿದ್ದಾರೆ. ಸಭೆಯಲ್ಲಿ ಜವಳಿ ಇಲಾಖೆ ಆಯುಕ್ತೆ ಜ್ಯೋತಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News