ಬೆಂಗಳೂರು | ಕಳ್ಳತನ ಪ್ರಕರಣ: ನಾಲ್ವರ ಬಂಧನ, 18 ದ್ವಿಚಕ್ರ ವಾಹನಗಳು, ಕಾರು ಜಪ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.4: ನಗರದ ಪರಪ್ಪನ ಅಗ್ರಹಾರ ಹಾಗೂ ಕುಂಬಳಗೂಡು ಠಾಣೆಗಳ ಪೊಲೀಸರು ನಾಲ್ವರನ್ನು ಬಂಧಿಸಿ, ಕಳವು ಮಾಡಲಾಗಿದ್ದ 11.67ಲಕ್ಷ ರೂ.ಮೌಲ್ಯದ 18 ದ್ವಿಚಕ್ರ ವಾಹನಗಳು ಹಾಗೂ ಕಾರನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಇಬ್ಬರನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು, 6.50 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕೃಷ್ಣಾ ರೆಡ್ಡಿ ಲೇಔಟ್‍ನ ನಿವಾಸಿಯೊಬ್ಬರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಹುಸ್ಕೂರು ಹಣ್ಣಿನ ಮಾರ್ಕೆಟ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಹಣ್ಣಿನ ಮಾರ್ಕೆಟ್ ಹಿಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 6.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿಗಳ ಬಂಧನದಿಂದ ಪರಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಸೂರ್ಯಸಿಟಿ, ಹೆಬ್ಬಗೋಡಿ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ಆವಲಹಳ್ಳಿ ಠಾಣೆಯ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ದ್ವಿಚಕ್ರ ವಾಹನ ಹಾಗೂ ಕಾರನ್ನು ಕಳ್ಳತನ ಮಾಡಿ ಓಡಾಡಿಕೊಂಡಿದ್ದ ಇಬ್ಬರನ್ನು ಕುಂಬಳಗೂಡು ಠಾಣೆಯ ಪೊಲೀಸರು ಬಂಧಿಸಿ, 5.17 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನ ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಕುಂಬಳಗೂಡು, ತಲಘಟ್ಟಪುರ, ಕೊಡಿಗೆಹಳ್ಳಿಪೊಲೀಸ್ ಠಾಣೆಗಳ ಒಟ್ಟು 5 ದ್ವಿಚಕ್ರ ವಾಹನಗಳು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.