ಕೂಡ್ಲಿಗಿ ಪ.ಪಂ ದಾಸ್ತಾನು ಮಳಿಗೆಯಲ್ಲಿ ರಾಸಾಯನಿಕ ಸೋರಿಕೆ | ಅಗ್ನಿ ಶಾಮಕ ಸಿಬ್ಬಂದಿ ಸಹಿತ 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
ವಿಜಯನಗರ ಜಿಲ್ಲೆ/ಕೂಡ್ಲಿಗಿ : ರಾಸಾಯನಿಕ ದ್ರವ್ಯ ಸೋರಿಕೆಯಾಗಿ ಕೂಡ್ಲಿಗಿ ಪಟ್ಟಣ ಪಂಚಾಯತ್ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, 7ಜನ ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಅಂದಾಜು 20ಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆೆ.
ಪಟ್ಟಣ ಪಂಚಾಯತ್ ಕಚೇರಿಯ ತಳಪಾಯದಲ್ಲಿರುವ ದಾಸ್ತಾನು ಮಳಿಗೆ ಯಲ್ಲಿ ರಾಸಾಯನಿಕ ದ್ರವ್ಯ ಸೋರಿಕೆ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸಿದಾಗ ದಾಸ್ತಾನು ಮಳಿಗೆಯಲ್ಲಿದ್ದ ಕ್ಲೋರಿನ್ ಹಾಗೂ ಆಕ್ಸಿಜನ್ ಸೋರಿಕೆಯಾಗಿ ಬ್ಲೀಚಿಂಗ್ ಪೌಡರ್ ಮಿಶ್ರಣವಾಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಗ್ನಿಶಾಮಕ ಸಿಬ್ಬಂದಿ ಸಹಿತ ರಾಸಾಯನಿಕ ಗಾಳಿ ಸೇವಿಸಿ ಅಸ್ವಸ್ಥಗೊಂಡವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.