ಬಿಜೆಪಿಗರು ಕರ್ನಾಟಕದ ಪಾಲಿನ ಹಣ ಕೊಡಿಸಲಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ. 31: ‘ಪ್ರತಿಪಕ್ಷ ಬಿಜೆಪಿಯವರಿಗೆ ರಾಜಕೀಯ ಇಚ್ಚಾಶಕ್ತಿಯಿದ್ದರೆ ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಕೊಡಿಸಲಿ. ಜತೆಗೆ ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಅನುಮತಿ ಕೊಡಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯವರು ಧರ್ಮಸ್ಥಳ ಪ್ರಕರಣದ ನೆಪದಲ್ಲಿ ಧರ್ಮಸ್ಥಳ ಯಾತ್ರೆ ಮಾಡುವ ಬದಲು ಹೊಸದಿಲ್ಲಿಯಲ್ಲಿ ಹೋರಾಟ ಮಾಡಲಿ. ಬಿಜೆಪಿಯವರು ಧರ್ಮಸ್ಥಳಕ್ಕೆ ಹೋಗಿ ತಮ್ಮ ವೈಯಕ್ತಿಕ ಲಾಭಕ್ಕೆ ಪ್ರಾರ್ಥನೆ ಮಾಡಿಕೊಂಡು ಬರುತ್ತಾರೆಯೇ, ಹೊರತು ಬೇರೇನೂ ಇಲ್ಲ’ ಎಂದು ತಿರುಗೇಟು ನೀಡಿದರು.
ಬಿಜೆಪಿಯವರ ಹೋರಾಟ ಧರ್ಮಸ್ಥಳದಲ್ಲಿ ಅಲ್ಲ. ತಮ್ಮ ಪಕ್ಷದ ಎಲ್ಲ ಸಂಸದರು, ಶಾಸಕರನ್ನು ಕರೆದುಕೊಂಡು ಹೋಗಿ ಹೊಸದಿಲ್ಲಿಗೆ ತೆರಳಿ ರಾಜ್ಯಕ್ಕೆ ಬರಬೇಕಿರುವ ಅನುದಾನಕ್ಕಾಗಿ ಹೋರಾಟ ಮಾಡಬೇಕು ಎಂದು ಶಿವಕುಮಾರ್ ಛೇಡಿಸಿದರು.