ವಕೀಲರ ಹಿತವನ್ನು ಕಾಪಾಡುವುದು ಸರಕಾರದ ಕರ್ತವ್ಯ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು, ಆ.31: ವಕೀಲರ ಹಿತರಕ್ಷಣೆಯನ್ನು ಕಾಪಾಡುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು, ನ್ಯಾಯಾಲಯಗಳ ಆವರಣಗಳಲ್ಲಿ ವಕೀಲರ ಮೇಲಿನ ನಡೆಯುವ ಮಾರಣಾಂತಿಕ ಹಲ್ಲೆಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ ‘ಸನ್ಮಾನ ಸಮಾರಂಭ’ದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವಕೀಲರಿಗೆ ಜೀವ ರಕ್ಷಣೆ ಇಲ್ಲಾದಂತಾಗಿದೆ. ಇದನ್ನು ಮನಗಂಡ ಸರಕಾರವು ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡಲು ಅನುಮೋದನೆ ನೀಡಿದೆ ಎಂದರು.
ಸರಕಾರವು ವಕೀಲರ ಮತ್ತು ನ್ಯಾಯಾಂಗದ ಬೇಡಿಕೆಗಳನ್ನು ಇಡೇರಿಸಲು ಸದಾ ಸಿದ್ಧವಾಗಿರುತ್ತದೆ. ಜೊತೆಗೆ ಕರ್ನಾಟಕ ಸಿವಿಲ್ ಪ್ರೊಸಿಜರ್ ಕೋಡ್-2024ನಂತೆ ಸಿವಿಲ್ ಪ್ರಕರಣಗಳನ್ನು ಎರಡು ವರ್ಷದ ಒಳಗಾಗಿ ಇತ್ಯರ್ಥವಾಗುವಂತೆ ಮಾಡಲಾಗುವುದು. ಜನಸಾಮಾನ್ಯರ ಒಳತಿಗಾಗಿ ನ್ಯಾಯಾಂಗ ವ್ಯವಸ್ಥೆಯಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ರಕ್ಷಣಾ ಕಾಯ್ದೆಗೆ ಅನುಮೋದನೆಯನ್ನು ನೀಡಿರುವುದರಿಂದ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೆಯೇ ವಕೀಲರ ವಾಹನಗಳ ಮೇಲೆ ಅಂಟಿಸುವ ವಕೀಲರ ಚಿಹ್ನೆಯನ್ನು ಬಿಡುಗಡೆ ಮಾಡಲಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮಿಟ್ಟಲಕೋಡ ಎಸ್.ಎಸ್. ಮತ್ತು ಉಪಾಧ್ಯಕ್ಷ ವಿನಯ್ ಬಿ ಮಂಗಳೇಕರ್ ಮತ್ತಿತತರು ಉಪಸ್ಥಿತರಿದ್ದರು.