ಸಂಸದ ಡಾ.ಕೆ.ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ : ಬೆದರಿಕೆಯೊಡ್ಡಿ ವಸೂಲಿ ಮಾಡಿದ್ದ ಹಣ ವಾಪಸ್
ಬೆಂಗಳೂರು, ಸೆ.22 : ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರಿಗೆ ಬಂಧನದ ಬೆದರಿಕೆಯೊಡ್ಡಿ ವಂಚಿಸಲಾಗಿದ್ದ 14 ಲಕ್ಷ ರೂ. ಹಣವನ್ನು ಮರಳಿ ಹಿಂದಿರುಗಿಸುವಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ.26ರಂದು ಬೆಳಗ್ಗೆ 9:30ಕ್ಕೆ ಮುಂಬೈ ಸೈಬರ್ ಕ್ರೈಮ್ ವಿಭಾಗದ ಪೊಲೀಸರ ಸೋಗಿನಲ್ಲಿ ಪ್ರೀತಿ ಅವರಿಗೆ ಕರೆ ಮಾಡಿದ್ದ ವಂಚಕರು 14 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು ಎಂದು ತಿಳಿಸಿದರು.
ವಂಚಕರು, ‘ನಿಮ್ಮ ಕೆಲ ದಾಖಲೆಗಳನ್ನು ವ್ಯಕ್ತಿಯೊಬ್ಬ ಬಳಸಿಕೊಂಡು ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾಗಳಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದ್ದಾನೆ' ಎಂದು ಪ್ರೀತಿ ಅವರನ್ನು ಬೆದರಿಸಿದ್ದರು. ನಂತರ ‘ಆ ವ್ಯಕ್ತಿಯನ್ನು ಸದ್ಯ ಬಂಧಿಸಲಾಗಿದ್ದು, ನಿಮ್ಮ ಹೆಚ್ಚಿನ ವಿಚಾರಣೆಯ ಅಗತ್ಯವಿದೆ’ ಎಂದು ವಿಡಿಯೋ ಕರೆ ಮಾಡಿ ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡಿದ್ದರು. 'ನಿಮ್ಮ ಖಾತೆ ಅಕ್ರಮವಾಗಿದ್ದು, ಆರ್‌ಬಿಐ ವೆರಿಫಿಕೇಷನ್ ಪ್ರಕ್ರಿಯೆ ನಡೆಸಬೇಕಿರುವುದರಿಂದ 14 ಲಕ್ಷ ರೂಪಾಯಿ ಹಣವನ್ನು ತಾವು ಹೇಳಿದ ಖಾತೆಗೆ ವರ್ಗಾಯಿಸುವಂತೆ' ವಂಚಕರು ಪ್ರೀತಿ ಅವರಿಗೆ ಸೂಚಿಸಿದ್ದರು.
ವೆರಿಫಿಕೇಷನ್ ಮುಗಿಸಿ 45 ನಿಮಿಷದಲ್ಲಿ ಹಣವನ್ನು ವಾಪಸ್ ಹಿಂದಿರುಗಿಸುವುದಾಗಿ ತಿಳಿಸಿದ್ದರು. ವಂಚನೆಯ ಬಗ್ಗೆ ಅರಿಯದ ಪ್ರೀತಿ ಸುಧಾಕರ್ ಅವರು 14 ಲಕ್ಷ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವಂಚಕರ ಖಾತೆಗೆ ವರ್ಗಾಯಿಸಿದ್ದರು. ಹಣ ಪಾವತಿಸಿದ ಬಳಿಕ ವಂಚನೆಯಾಗಿರುವುದನ್ನು ಅರಿತ ಪ್ರೀತಿ ಅವರು ಕೂಡಲೇ ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ಕೈಗೊಂಡ ಸೈಬರ್ ಕ್ರೈಮ್ ಪೊಲೀಸರು ಕೂಡಲೇ ಪ್ರೀತಿ ಸುಧಾಕರ್ ಅವರಿಂದ ರಾಷ್ಟ್ರೀಯ ಸೈಬರ್ ಸಹಾಯವಾಣಿ (1930)ಗೆ ಕರೆಮಾಡಿಸಿ ದೂರು ದಾಖಲಿಸಿ, ವರ್ಗಾವಣೆಯಾದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಫ್ರೀಜ್ ಮಾಡಿಸಿದ್ದರು. ನಂತರ ಸೆ.3ರಂದು ನ್ಯಾಯಾಲಯದಿಂದ ಆದೇಶ ಪಡೆದು ವಂಚಕರ ಖಾತೆ ಸೇರಿದ್ದ 14 ಲಕ್ಷ ರೂಪಾಯಿ ಹಣವನ್ನು ತ್ವರಿತಗತಿಯಲ್ಲಿ ಪ್ರೀತಿ ಸುಧಾಕರ್ ಅವರ ಖಾತೆಗೆ ಮರು ವರ್ಗಾವಣೆ ಮಾಡಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದರು.