ವಕೀಲ ಮೋಹನ್ ಕಾತರಕಿ ಸೇರಿ 5 ಮಂದಿಗೆ ಗಡಿನಾಡು ಚೇತನ ಪ್ರಶಸ್ತಿ : ಸೋಮಣ್ಣ ಬೇವಿನಮರದ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಗಡಿ ಅಭಿವೃದ್ಧಿ ಪ್ರದೇಶ ಪ್ರಾಧಿಕಾರದ ವತಿಯಿಂದ ನೀಡಲಾಗುವ ‘ಗಡಿನಾಡು ಚೇತನ ಪ್ರಶಸ್ತಿ’ಗೆ ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಮೋಹನ್ ಕಾತರಕಿ ಸೇರಿದಂತೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯದೇವಿ ತಾಯಿ ಲಿಗಾಡೆ ಹೆಸರಿನ ಪ್ರಶಸ್ತಿಗೆ ಮೋಹನ್ ಕಾತರಕಿ, ಚನ್ನಬಸವ ಪಟ್ಟದ್ದೇವರ ಹೆಸರಿನ ಪ್ರಶಸ್ತಿಗೆ ರಾಯಚೂರಿನ ಹೋರಾಟಗಾರ ಮಲ್ಲನಗೌಡ ಇಂದುಪುರ, ಫ.ಗು.ಹಳಕಟ್ಟಿ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ವಿಜಯಪುರದ ನಾಗೇಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಯ್ಯಾರ ಕಿಞ್ಞಣ್ಣ ರೈ ಹೆಸರಿನ ಪ್ರಶಸ್ತಿಗೆ ಕಾಸರಗೋಡಿನ ನಿವೃತ್ತ ಶಿಕ್ಷಕ ಎನ್.ಚನಿಯಪ್ಪ ನಾಯ್ಡು, ಬೆಳವಡಿ ಮಲ್ಲಮ್ಮ ಹೆಸರಿನ ಪ್ರಶಸ್ತಿಗೆ ಮಸ್ಕತ್‍ನಲ್ಲಿ ಕನ್ನಡ ಸಂಘ ನಡೆಸುತ್ತಿರುವ ಶಾಲೆಯಲ್ಲಿ ಕನ್ನಡ ಪಾಠ ಮಾಡುತ್ತಿರುವ ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.