×
Ad

ಮನರೇಗಾ ಮುಂದುವರಿಕೆಗೆ ಕಾರ್ಮಿಕರ ಒಕ್ಕೊರಲ ಆಗ್ರಹ; ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ʼಮನರೇಗಾ ಕಾರ್ಮಿಕರ ಮಹಾಪಂಚಾಯತ್ʼ

Update: 2026-02-02 23:40 IST

ಬೆಂಗಳೂರು : ‘ಕೇಂದ್ರ ಸರಕಾರ ತಂದಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಸಾರಾಸಗಟು ತಿರಸ್ಕರಿಸಬೇಕು ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ಮನರೇಗಾ)ಯೋಜನೆಯನ್ನೇ ಬಲಪಡಿಸಿ ಮುಂದುವರಿಸಬೇಕು’ ಎಂದು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ‘ಮನರೇಗಾ ಕೂಲಿ ಕಾರ್ಮಿಕರು’ ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮನರೇಗಾ ರಕ್ಷಣಾ ಒಕ್ಕೂಟ-ಕರ್ನಾಟಕದ ವತಿಯಿಂದ ಆಯೋಜಸಿದ್ದ ‘ಮನರೇಗಾ ಕಾರ್ಮಿಕರ ಮಹಾ ಪಂಚಾಯತ್’ನಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಯೋಜನೆಯನ್ನೇ ಬಲಪಡಿಸುವಂತೆ ಒತ್ತಾಯಿಸಿದರು.

ಗ್ರಾಮೀಣ ಬಡವರಿಗೆ ಬೆನ್ನೆಲುಬಾಗಿದ್ದ, ಸಂವಿಧಾನ ಬದ್ಧ ಹಕ್ಕಾಗಿದ್ದ, ಮನರೇಗಾ ಯೋಜನೆಯನ್ನು ಕೇಂದ್ರ ಸರಕಾರವು ರದ್ದುಗೊಳಿಸಿದೆ. ಅದರ ಜಾಗದಲ್ಲಿ ಜನರನ್ನು ಅತಂತ್ರಗೊಳಿಸುವ, ಪ್ರತಿಯೊಂದು ತೀರ್ಮಾನದ ಹಕ್ಕನ್ನೂ ತಾನೇ ವಶಪಡಿಸಿಕೊಳ್ಳುವ, ರಾಜ್ಯಗಳ ಮೇಲೆ ಜವಾಬ್ದಾರಿಯನ್ನು ಹೊರಿಸುವ ವಿಬಿ-ಜಿ ರಾಮ್‌ ಜಿ ಕಾಯ್ದೆ ಜಾರಿಗೆ ತಂದಿರುವುದು ದುಡಿಯುವ ಜನರ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸುವ ವರೆಗೆ ಕೂಲಿ ಕಾರ್ಮಿಕರ ಹೋರಾಟವನ್ನು ಮುಂದುವರಿಸುವ ತೀರ್ಮಾನವನ್ನು ಮಾಡಿದೆ. ಈ ಕಾಯ್ದೆಯನ್ನು ತಿರಸ್ಕರಿಸಿ ಹಿಂದೆ ಕಳುಹಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು.

ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, 200 ದಿನ ಕೆಲಸ ಕೊಡಬೇಕು ದುಡಿಯುವ ಕೈಗಳಿಗೆ ಕೆಲಸ ಕೊಡಲೇಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಕಡಿತ ಮಾಡಿರುವ ಕೇಂದ್ರ ಸರಕಾರಕ್ಕೆ ಧಿಕ್ಕಾರ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ‘ವಿಬಿ ಜಿ-ರಾಮ್ ಜಿ ಹಿಂಪಡೆಯುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹೋರಾಟಗಾರ ನೂರ್ ಶ್ರೀಧರ್, ಗಾಯತ್ರಿ, ದೇವಿ, ಗುರುರಾಜ್, ಶಾರದಾ, ನವೀನ್, ಮೋಕ್ಷಮ್ಮ, ಮಹಾಂತೇಶ, ಸ್ವಪ್ನ ಮತ್ತಿತರರು ಹಾಜರಿದ್ದರು.

ಪ್ರಮುಖ ನಿರ್ಣಯಗಳು: ಕರ್ನಾಟಕ ಸರಕಾರ ಅಧಿವೇಶನದಲ್ಲಿ ವಿಬಿ-ಜಿ ರಾಮ್‌ ಜಿ ಕಾಯ್ದೆಯನ್ನು ತಿರಸ್ಕರಿಸುವ ಮನರೇಗಾ ಯೋಜನೆಯನ್ನು ಮುಂದುವರಿಸುವ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಮನರೇಗಾ ರಕ್ಷಣಾ ಒಕ್ಕೂಟ ಬರೆದಿರುವ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳ ಗಮನಕ್ಕೆ ಬರುವಂತೆ ಕಳುಹಿಸಿಕೊಡಬೇಕು ಎಂದು ‘ಮನರೇಗಾ ಕಾರ್ಮಿಕರ ಮಹಾ ಪಂಚಾಯತ್’ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಮನರೇಗಾ ಯೋಜನೆಯನ್ನು ರದ್ದುಗೊಳಿಸಿ, ಬಿಜೆಪಿ ಸರಕಾರ ಸಂವಿಧಾನ ವಿರೋಧಿ, ಜನ, ಗ್ರಾಮೀಣಾಭಿವೃದ್ಧಿ ವಿರೋಧಿ ಕಾಯ್ದೆ ಜಾರಿ ಮಾಡಿದೆ. 125 ದಿನ ಎಂದು ಮೂಗಿಗೆ ತುಪ್ಪ ಹಚ್ಚಿದ್ದಾರೆ’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News