ಕಾನೂನು ಸುವ್ಯವಸ್ಥೆ ಹಳಿ ತಪ್ಪಲು ಬಿಡುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಯಾವುದೇ ಕಾರಣಕ್ಕೂ ಹಳಿ ತಪ್ಪಲು ನಾನು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪ್ರಸ್ತಾವಿಸಿದ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಉತ್ತರಿಸಿದ ಅವರು, ದೇಶದ 125 ನಗರಗಳಲ್ಲಿ ಸಮೀಕ್ಷೆ ನಡೆಸಿರುವ ಚೆನ್ನೈ ಮೂಲದ ಅವತಾರ್ ಸಂಸ್ಥೆಯು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿಗೆ ಪ್ರಥಮ ಸ್ಥಾನ ನೀಡಿದೆ ಎಂದು ಹೇಳಿದರು.
ಮಾದಕ ವಸ್ತುಗಳ ವಿರುದ್ಧ ಸಮರ: ಮಾದಕ ವಸ್ತುಗಳು(ಡ್ರಗ್ಸ್) ತಯಾರಿಸುವಂತಹ ಅತೀ ಹೆಚ್ಚು ಲ್ಯಾಬೋರೇಟರಿಗಳು ಗುಜರಾತ್, ರಾಜಸ್ತಾನ ಹಾಗೂ ಮಹಾರಾಷ್ಟ್ರದಲ್ಲಿವೆ. ಮಾದಕ ವಸ್ತುಗಳ ನಿಯಂತ್ರಣದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲ. ಈಗಾಗಲೆ ನಮ್ಮ ಸರಕಾರ ಸಾವಿರಾರು ಕೋಟಿ ರೂ.ಮೌಲ್ಯದ ಡ್ರಗ್ಸ್ ಅನ್ನು ಹಿಡಿದಿದೆ. ಪೆಡ್ಲರ್‍ಗಳು ಹಾಗೂ ಬಳಕೆದಾರರ ವಿರುದ್ಧ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸರ ಮೂಲಕ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸುಮಾರು 16 ಲಕ್ಷ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಪೊಲೀಸ್ ಅಧಿಕಾರಿಗಳು ತಮ್ಮ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಅದರ ಲ್ಯಾಬೋರೇಟರಿಗಳು ಎಲ್ಲಿವೆ ಎಂಬುದರ ಕುರಿತು ನಿಗಾವಹಿಸಬೇಕು. ಅಲ್ಲದೇ, ಯಾವುದೆ ಹೊಸ ಕೆಮಿಕಲ್ ಫ್ಯಾಕ್ಟರಿ, ಲ್ಯಾಬೋರೇಟರಿಗಳು ಆರಂಭವಾದರೆ ಪೊಲೀಸರು ಹೋಗಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರತದ ಗಡಿಯೊಳಗೆ ಹೇಗೆ ಪ್ರವೇಶಿಸುತ್ತಾರೆ? ದೇಶದ ಗಡಿಯನ್ನು ಕಾಯುವುದು ಯಾರು? ಇದರಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. 370 ಮಂದಿ ಅಕ್ರಮ ಬಾಂಗ್ಲಾದೇಶಿಯರನ್ನು ಗುರುತಿಸಲಾಗಿದೆ. ಈ ಪೈಕಿ 196 ಜನರನ್ನು ಗಡಿಪಾರು ಮಾಡಲಾಗಿದೆ. ಉಳಿದವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೆ ಅವರನ್ನು ಗಡಿಪಾರು ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಅಕ್ರಮವಾಗಿ ನಮ್ಮ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡಲು ವಿಶೇಷ ಅಭಿಯಾನ ನಡೆಸಲು ಉದ್ದೇಶಿಸಿದ್ದೇವೆ. ಸೈಬರ್ ಅಪರಾಧಗಳ ತಡೆಗೆ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗ ರಚನೆ ಮಾಡಿದ್ದೇವೆ. ಅದರಲ್ಲಿ, ಎಡಿಜಿ, ಐಜಿ ಮಟ್ಟದ ಅಧಿಕಾರಿಗಳಿದ್ದಾರೆ. ಪೊಲೀಸರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇರಬೇಕು. ಅದನ್ನು ಉಲ್ಲಂಘಿಸುವವರಿಗೆ ಇಲಾಖೆಯಲ್ಲಿ ಇಟ್ಟುಕೊಂಡು ಏನು ಮಾಡಬೇಕು. ನಾವು ಹಿರಿಯ ಅಧಿಕಾರಿಗಳು ಸೇರಿದಂತೆ 125 ಮಂದಿ ಅಮಾನತ್ತು ಮಾಡಿದ್ದೇವೆ. ಭ್ರಷ್ಟಾಚಾರವನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯವಿಲ್ಲದಿದ್ದರೂ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.