ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದ ನಸೀರ್ ಅಹ್ಮದ್: ವಿಧಾನ ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿ
ಬೆಂಗಳೂರು : ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಅವರು "ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ" ಎಂದು ಹೇಳಿದ್ದು, ವಿಧಾನ ಪರಿಷತ್‌ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಉತ್ತರಿಸುವ ವೇಳೆ, ಪ್ರತಿಪಕ್ಷದವರು, "ರಾಜ್ಯ ಸರಕಾರದ ಬಳಿ ಹಣವಿಲ್ಲ. ಆದ್ದರಿಂದ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯದಲ್ಲಿ ದಂಗೆ ಏಳುತ್ತಿದ್ದಾರೆ" ಎಂದು ಆರೋಪಿಸುತ್ತಿದ್ದಾರೆ ಎಂದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರೊಬ್ಬರು ಕೇಂದ್ರವೇ ದಿವಾಳಿ ಆಗಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು, ಕೇಂದ್ರ ಸರಕಾರ ಆರ್ಥಿಕ ಸ್ಥಿತಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಮೋದಿ ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದೆ. ಮೋದಿಜೀಯಿಂದಲೇ ದೇಶ ಇದೆ ಎಂದು ಹೇಳಿದರು.
ಇದಕ್ಕೆ ಕಾಂಗ್ರೆಸ್ ನಸೀರ್ ಅಹ್ಮದ್ ಅವರು, ದೇಶದ ಈ ಪರಿಸ್ಥಿತಿ ಮೋದಿಯಿಂದಲೇ ಬಂದಿದೆ. ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದು ಕೂಗಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಕೇಶವಪ್ರಸಾದ್, ಸಿ.ಟಿ.ರವಿ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಪ್ರಧಾನಿಯವರನ್ನು ದೇಶ ದ್ರೋಹಿ ಎಂದ ನಸೀರ್ ಅಹ್ಮದ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ನಸೀರ್ ಅಹ್ಮದ್ ಅವರ ಹೇಳಿಕೆಯನ್ನು ಕಡತದಿಂದ ತೆಗೆಸಿದರೂ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು.