ಅರಳಲಿದೆ ‘ಗಂಗ ಸಾಮ್ರಾಜ್ಯದ ವೈಭವ’ | ಆ.6ರಿಂದ 17ರ ವರೆಗೆ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ: ಆರ್.ಗಿರೀಶ್

Update: 2026-08-04 23:06 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಲಾಲ್‍ಬಾಗ್‍ನಲ್ಲಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಗಂಗ ಸಾಮ್ರಾಜ್ಯದ ಗತವೈಭವ ಹೂಗಳ ಮೂಲಕ ಅನಾವರಣಗೊಳ್ಳಲಿದೆ. ಫಲಪುಷ್ಪ ಪ್ರದರ್ಶನವು ಆ.6ರಿಂದ 17ರ ವರೆಗೆ 12 ದಿನಗಳ ಕಾಲ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಸರಕಾರದ ಕಾರ್ಯದರ್ಶಿ ಆರ್.ಗಿರೀಶ್ ತಿಳಿಸಿದ್ದಾರೆ.

ಮಂಗಳವಾರ ನಗರದ ಲಾಲ್‍ಬಾಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.6ರಂದು ಬೆಳಗ್ಗೆ 11ಗಂಟೆಗೆ ಸಿಎಂ ಡಿ.ಕೆ.ಶಿವಕುಮಾರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಗಂಗರ ಆಳ್ವಿಕೆಯ ವೈಭವವನ್ನು ಬಿಂಬಿಸುವ ಬಣ್ಣ ಬಣ್ಣದ ಹೂವಿನ ಕಲಾಕೃತಿಗಳು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ. ಗಂಗ ದೊರೆಗಳ ಬಲಿಷ್ಠ ಗಜಸೇನೆ, ಯುದ್ಧದ ಸನ್ನಿವೇಶ, ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ ಹಾಗೂ ತಲಕಾಡಿನ ದೇವಾಲಯಗಳ ಪ್ರತಿಕೃತಿಗಳನ್ನು ಹೂಗಳಿಂದ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಎಂ.ಜಗದೀಶ್ ಮಾತನಾಡಿ, ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಶಿಲ್ಪಕಲೆಗೆ ಗಂಗರ ಕೊಡುಗೆಯನ್ನು ಪರಿಚಯಿಸುವ ವಿನೂತನ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಇತಿಹಾಸವನ್ನು ಹೂಗಳ ಮೂಲಕ ಜನರಿಗೆ ಪರಿಚಯಿಸುವ ಉದ್ದೇಶದಿಂದ ಗಂಗ ಸಾಮ್ರಾಜ್ಯದ ವಿಷಯದ ಕುರಿತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

220ನೇ ಫಲಪುಷ್ಪ ಪ್ರದರ್ಶನಕ್ಕಾಗಿ ಸುಮಾರು 2.75ಕೋಟಿ ರೂ.ಹಣ ಮೀಸಲಿಡಲಾಗಿದೆ. ಪ್ರದರ್ಶನಕ್ಕೆ ಅಗತ್ಯವಿರುವ ಹೂವುಗಳನ್ನು ಕುಂಡಗಳಲ್ಲಿ ಹಾಗೂ ನೆಲದಲ್ಲಿ ಬೆಳೆಸಲಾಗಿದ್ದು, ವಿವಿಧ ರಾಜ್ಯಗಳಿಂದ ಅಪರೂಪದ ಹೂವುಗಳನ್ನು ತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಲಕ್ಷಾಂತರ ಮಂದಿ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಈ ಬಾರಿ ಲಾಲ್‍ಬಾಗ್ ಕೆರೆ ಬಳಿ ಕೃತಕ ಜಲಪಾತ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗಾಗಿ ವಿಶೇಷ ಸೆಲ್ಫಿ ಪಾಯಿಂಟ್ ಕೂಡ ನಿರ್ಮಿಸಲಾಗಿದೆ. ಹೂವಿನ ಕಲಾಕೃತಿಗಳ ಜೊತೆಗೆ ಇವು ಕೂಡ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದರು. ಬೆಳಗ್ಗೆ 11ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಗಂಗ ಸಾಮ್ರಾಜ್ಯದ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪವನ್ನು ಹೂಗಳ ಕಲಾತ್ಮಕ ಲೋಕದಲ್ಲಿ ಕಣ್ತುಂಬಿಕೊಳ್ಳಲು ಬೆಂಗಳೂರಿಗರಿಗೆ ಈ ಬಾರಿಯ ಫಲಪುಷ್ಪ ಪ್ರದರ್ಶನ ವಿಶೇಷ ಅವಕಾಶವಾಗಲಿದೆ ಎಂದು ತಿಳಿಸಿದರು.

 

ಪ್ರವೇಶ ಶುಲ್ಕ ಎಷ್ಟು?: ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ಮಕ್ಕಳಿಗೆ 30ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶನಿವಾರ ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ. ಶುಲ್ಕ ಇರಲಿದೆ. 10ನೇ ತರಗತಿವರೆಗಿನ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಬಂದರೆ ಉಚಿತ ಪ್ರವೇಶ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

 

ಆನ್‍ಲೈನ್ ಟಿಕೆಟ್, ಪಾರ್ಕಿಂಗ್‌ ವ್ಯವಸ್ಥೆ: ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಬಾರಿ ಆನ್‍ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಲಾಲ್‍ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 136 ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ತುರ್ತು ಪರಿಸ್ಥಿತಿ ಎದುರಾದಲ್ಲಿ ನೆರವಾಗಲು ನಾಲ್ಕು ದ್ವಾರಗಳಲ್ಲೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News