×
Ad

ಜೂ.13ರಿಂದ ರಾಜ್ಯಾದ್ಯಂತ ಎಸ್‍ಐಆರ್ ವಿರೋಧಿ ಜನಜಾಗೃತಿ ಜಾಥಾ

Update: 2026-06-11 23:25 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ರಾಜ್ಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್)ಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆ, ಪ್ರಶ್ನೆಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ/ ಸ್ಪಂದನೆ ದೊರತಿಲ್ಲ. ಆಯೋಗದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕ’ದ ವತಿಯಿಂದ ಜೂ.13 ರಿಂದ ಜೂ.18ರ ವರಗೆ ರಾಜ್ಯವ್ಯಾಪಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಗುರುವಾರ ಈ ಕುರಿತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯ, ಎದ್ದೇಳು ಕರ್ನಾಟಕ ಪದಾಧಿಕಾರಿ ಕೆ.ಎಲ್.ಅಶೋಕ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ‘ಇದು ಕರ್ನಾಟಕ ಇಲ್ಲಿ ನಡೆಯದು ಯಾವುದೇ ದುಷ್ಟ ಆಟ’ ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದಿದ್ದಾರೆ.

ಜನಜಾಗೃತಿ ಅಭಿಯಾನವು ಐದು ಮಾರ್ಗಗಳಲ್ಲಿ ನಡೆಯಲಿದೆ. ಮಾರ್ಗ-1ರಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಮಾರ್ಗ-2ರಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಮಾರ್ಗ-3ರಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವರಣಗೆರೆ, ಚಿತ್ರದುರ್ಗ, ಮಾರ್ಗ-4ರಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ, ರಾಮನಗರ ಹಾಗೂ ಮಾರ್ಗ-5ರಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಜಾಥಾ ಸಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂವಿಧಾನ ಎಲ್ಲ ನಾಗರಿಕರಿಗೂ ಸಮಾನ ಮತ ಹಕ್ಕನ್ನು ನೀಡಿದೆ. ಅದನ್ನು ಕಾಪಾಡುವುದು ಚುನಾವಣಾ ಆಯೋಗದ ಕರ್ತವ್ಯ. ಪ್ರಜಾಪ್ರಭುತ್ವದ ಬೇರು, ಆಶಯ ನಾಗರಿಕರ ಮತದಾನದ ಹಕ್ಕಿನ ರಕ್ಷಣೆಯ ಮೇಲೆ ನಿಂತಿದೆ. ಮತದಾನದ ಹಕ್ಕು ಕೇವಲ ಆಡಳಿತಾತ್ಮಕ ವಿಷಯವಲ್ಲ, ಅದು ನಾಗರಿಕ ಸಮಾನತೆಯ ಮತ್ತು ಸಂವಿಧಾನ ಮೌಲ್ಯಗಳ ಪ್ರತೀಕ. ಇಂದಿನ ಚುನಾವಣಾ ಆಯೋಗವು ಇಂತಹ ಸಂವಿಧಾನ ಆಶಯ, ಮೌಲ್ಯಗಳನ್ನು ಮರೆತು ಬಿಜೆಪಿ ಸರಕಾರಕ್ಕೆ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿರುವುದು ದುರಂತ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್‍ಐಆರ್ ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ 3 ಕೋಟಿಯ ತನಕ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ. ಎಸ್‍ಐಆರ್ ಮೂಲಕ ನುಸುಳುಕೋರರನ್ನು ಪತ್ತೆ ಹಚ್ಚುತ್ತಿಲ್ಲ, ಬದಲಿಗೆ ಮತದಾನದ ಹಕ್ಕು ಇಲ್ಲದ ಎರಡನೇ ದರ್ಜೆಯ ಜನ ವರ್ಗವನ್ನು ಸೃಷ್ಟಿಸುವ ಹುನ್ನಾರ ಇದರಲ್ಲಿ ಅಡಗಿದೆ. ‘ಶರಣ, ಸೂಫಿ, ಸಂತರ ನಾಡಿನಲ್ಲಿ ಇಂತಹ ಯಾವುದೇ ದುಷ್ಟ ನೀತಿಗಳು ನಡೆಯುವುದಿಲ್ಲ’ ಎಂದು ಚುನಾವಣಾ ಆಯೋಗಕ್ಕೆ ಎಚ್ಚರಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ನಡೆಸಿದ ಸ್ವರೂಪದಲ್ಲಿಯೇ ಎಸ್‍ಐಆರ್ ಅನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಬಿಡುವುದಿಲ್ಲ. ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್‌ ವೇರ್ ಬಳಸಬಾರದು, ಕರಡು ಪಟ್ಟಿ ತಯಾರಾದ ನಂತರ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು, ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಫಾಮ್ರ್ಯಾಟ್ ಮೂಲಕ ಪಾರದರ್ಶಕತೆ ಪಾಲಿಸಬೇಕು, ಮನವಿ/ ಆಕ್ಷೇಪಣೆ ಸಲ್ಲಿಸಲು-ಅಗತ್ಯ ದಾಖಲೆ ಒದಗಿಸಲು ಕನಿಷ್ಠ ಆರು ತಿಂಗಳ ಸಮಯವಕಾಶ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಮತದಾನದ ಹಕ್ಕನ್ನು ದುರ್ಬಲಗೊಳಿಸುವ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿಯುವ, ಆಡಳಿತಾತ್ಮಕ ಅಧಿಕಾರವನ್ನು ಮನಬಂದಂತೆ ಬಳಸುವ ಯಾವುದೇ ದುಷ್ಟ ಪ್ರಯತ್ನಗಳನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಸಹಿಸುವುದಿಲ್ಲ. ರಾಜ್ಯ ಚುನಾವಣಾ ಆಯೋಗ ನಾಗರಿಕ ಸಮಾಜಕ್ಕೆ ಉತ್ತರ ಕೊಡಲೇಬೇಕು ಮತ್ತು ನಮ್ಮ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಲೇ ಬೇಕು ಎಂಬ ಆಗ್ರಹದೊಂದಿಗೆ ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿರೋಧ ಸಮಾವೇಶ ನಡೆಯಲಿದೆ ಎಂದು ಹೋರಾಟಗಾರರು ಮಾಹಿತಿ ನೀಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News