ಗೃಹಲಕ್ಷ್ಮಿ ಈಗ ‘ಅನರ್ಹ ಲಕ್ಷ್ಮಿ’ : ಆರ್.ಅಶೋಕ್
ಬೆಂಗಳೂರು : ಚುನಾವಣೆಗೆ ಮೊದಲು ‘ಗೃಹಲಕ್ಷ್ಮಿ', ಚುನಾವಣೆ ಬಳಿಕ ‘ಅನರ್ಹ ಲಕ್ಷ್ಮಿ'- ಇದೇ ಕಾಂಗ್ರೆಸ್‍ನ ಗ್ಯಾರಂಟಿಗಳ ನಿಜವಾದ ಮುಖ. ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂ. ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರದಬ್ಬಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಗೃಹಲಕ್ಷ್ಮಿ ಯೋಜನೆಗೆ ‘ಕಂಡೀಷನ್ ಅಪ್ಲೈ ಇಲ್ಲ’ ಎಂಬಂತೆ ಪ್ರಚಾರ ಮಾಡಿ, ಈಗ ಒಂದೊಂದೇ ನೆಪ ಹುಡುಕಿ ತಾಯಂದಿರ ಹೆಸರನ್ನು ಪಟ್ಟಿಯಿಂದ ಕಿತ್ತೆಸೆಯುತ್ತಿದೆ. ಇದಕ್ಕಿಂತ ದೊಡ್ಡ ದುರಂತ ಎಂದರೆ, ಈ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿಯ ಉತ್ತರ-‘ನನಗೆ ಗೊತ್ತಿಲ್ಲ.’ ರಾಜ್ಯದ 1.1 ಲಕ್ಷ ಮಹಿಳೆಯರ ಬದುಕಿನ ಪ್ರಶ್ನೆ ಮುಖ್ಯಮಂತ್ರಿಗೆ ಗೊತ್ತಿಲ್ಲ ಎಂದರೆ, ರಾಜ್ಯವನ್ನು ನಡೆಸುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಗೂ ಮೊದಲು ಪ್ರತಿ ಮನೆಯ ಯಜಮಾನಿಗೂ 2,000 ರೂ. ಎಂದು ಭರವಸೆ. ಚುನಾವಣೆ ಬಳಿಕ ಅನರ್ಹರ ಪಟ್ಟಿ. ಈಗ ಬಯೋಮೆಟ್ರಿಕ್ ಹೆಸರಲ್ಲಿ ಹೊಸ ಕಿರುಕುಳ. ಇದೇನಾ ಕಾಂಗ್ರೆಸ್‍ನ ಮಹಿಳಾ ಸಬಲೀಕರಣ?. ವೋಟ್ ಬ್ಯಾಂಕ್‍ಗಾಗಿ ಮಹಿಳೆಯರನ್ನು ಬಳಸಿಕೊಂಡು, ಅಧಿಕಾರ ಸಿಕ್ಕ ಬಳಿಕ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕಾಂಗ್ರೆಸ್‍ನ ಈ ದ್ವಂದ್ವ ನೀತಿಯನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
‘ಗ್ಯಾರಂಟಿ’ ಎಂದು ಮತ ಪಡೆದು, ‘ಅನರ್ಹ’ ಎಂದು ಹಕ್ಕು ಕಸಿಯುವ ಕಾಂಗ್ರೆಸ್ ಸರಕಾರ ರಾಜ್ಯದ ತಾಯಂದಿರಿಗೆ ಉತ್ತರ ಕೊಡಲೇಬೇಕು. ತಕ್ಷಣವೇ ಈ ಅನ್ಯಾಯವನ್ನು ನಿಲ್ಲಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಗೊಂದಲವಿಲ್ಲದೆ ಯೋಜನೆಯ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಾಯಂದಿರ ಶಾಪಕ್ಕೆ ಈ ಸರಕಾರ ಸುಟ್ಟು ಭಸ್ಮವಾಗುವುದು ಗ್ಯಾರಂಟಿ ಎಂದು ಅಶೋಕ್ ತಿಳಿಸಿದ್ದಾರೆ.
ಚುನಾವಣೆಗೆ ಮೊದಲು 'ಗೃಹಲಕ್ಷ್ಮಿ', ಚುನಾವಣೆ ಬಳಿಕ 'ಅನರ್ಹ ಲಕ್ಷ್ಮಿ' - ಇದೇ ಕಾಂಗ್ರೆಸ್‍ನ ಗ್ಯಾರಂಟಿಗಳ ನಿಜವಾದ ಮುಖ!
— R. Ashoka (@RAshokaBJP) June 11, 2026
ಪ್ರತಿ ಮನೆಯ ಯಜಮಾನಿಗೆ ₹2,000 ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರದಬ್ಬಲು ಹೊರಟಿದೆ ಲಜ್ಜೆಗೆಟ್ಟ ಕಾಂಗ್ರೆಸ್… pic.twitter.com/VvBLp3APfO