×
Ad

ಅ.3ಕ್ಕೆ ಮಹಾರಾಣಿ ಕ್ಲಸ್ಟರ್ ವಿವಿ ಘಟಿಕೋತ್ಸವ | ಭಾರತಿ ವಿಷ್ಣುವರ್ಧನ್, ದು.ಸರಸ್ವತಿ ಸಹಿತ ಆರು ಮಂದಿಗೆ ಗೌರವ ಡಾಕ್ಟರೇಟ್ : ಡಾ.ಮಂಜುನಾಥ್

Update: 2025-09-29 23:53 IST

ಭಾರತಿ ವಿಷ್ಣುವರ್ಧನ್

ಬೆಂಗಳೂರು, ಸೆ.29 : ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2 ಮತ್ತು 3ನೇ ವಾರ್ಷಿಕ ಘಟಿಕೋತ್ಸವವನ್ನು ಅ.3ರಂದು ಬೆಂಗಳೂರು ನಗರ ವಿವಿ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ನಟಿ ಭಾರತಿ ವಿಷ್ಣುವರ್ಧನ್, ಲೇಖಕಿ ದು.ಸರಸ್ವತಿ ಸೇರಿದಂತೆ ಆರು ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ ಡಾ.ಟಿ.ಎಂ.ಮಂಜುನಾಥ್ ತಿಳಿಸಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಮಿಯೋಪತಿ ವೈದ್ಯ ಡಾ.ಬಿ.ಟಿ. ರುದ್ರೇಶ್, ಶಿಕ್ಷಣ ತಜ್ಞೆ ಡಾ.ಎಚ್.ಎನ್.ಉಷಾ, ಬಯೋಕಾನ್ ಲಿಮಿಟೆಡ್‍ನ ಎಕ್ಸಿಕ್ಯೂಟಿವ್ ಸಂಸ್ಥಾಪಕ ಡಾ.ಕಿರಣ್ ಮಜುಂದಾರ್ ಷಾ, ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುವುದು ಎಂದು ಮಾಹಿತಿ ನೀಡಿದರು.

2023-24ನೇ ಸಾಲಿನಲ್ಲಿ 1346 ಯುಜಿ ಪದವಿ, 481 ಸ್ನಾತಕೋತ್ತರ ಪದವಿ, 28 ವಿದ್ಯಾರ್ಥಿಗಳಿಗೆ ಯುಜಿ ರ್ಯಾಂಕ್, 23 ವಿದ್ಯಾರ್ಥಿಗಳಿಗೆ ಪಿಜಿ ರ್ಯಾಂಕ್ ಹಾಗೂ 6 ಯುಜಿ, 18 ಪಿಜಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ ಮಾಡಲಾಗುವುದು. 2024-25ನೇ ಸಾಲಿನಲ್ಲಿ 1209 ಯುಜಿ, 537 ಪಿಜಿ ಪದವಿ ಹಾಗೂ 30 ಯುಜಿ ರ್ಯಾಂಕ್, 26 ಪಿಜಿ ರ್ಯಾಂಕ್, 10 ಯುಜಿ, 18 ಪಿಜಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಲಾಗುವುದು ಎಂದು ಹೇಳಿದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಜರಿರುತ್ತಾರೆ. ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾರಾಣಿ ಕ್ಲಸ್ಟರ್ ವಿವಿಯ ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಎಸ್.ಸತೀಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News