ನಬಾರ್ಡ್‍ನಿಂದ ಶೇ.58ರಷ್ಟು ಅನುದಾನ ಕಡಿತ : ಸಚಿವ ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ
ಬೆಂಗಳೂರು : ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ನಬಾರ್ಡ್‍ನಿಂದ ಈ ಬಾರಿ ಶೇ.58ರಷ್ಟು ಕಡಿಮೆ ಅನುದಾನ ಮಂಜೂರು ಮಾಡಲಾಗಿದೆ. ರಾಜ್ಯಕ್ಕೆ 9,219 ಕೋಟಿ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಂಗಳವಾರ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ನಬಾರ್ಡ್ ಈ ಬಾರಿ 3,236 ಕೋಟಿ ರೂ. ಮಂಜೂರು ಮಾಡಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಹಣ ಮಂಜೂರಾಗಿದೆ. 2023-24ರಲ್ಲಿ 5,600 ಕೋಟಿ ರೂ. ಮಂಜೂರಾಗಿತ್ತು ಎಂದರು.
ಈ ಸಂಬಂಧ ನಬಾರ್ಡ್‍ಗೆ ರಾಜ್ಯ ಸರಕಾರ ಪತ್ರ ಬರೆದು ಮನವಿ ಮಾಡಿದಾಗ ಹೆಚ್ಚುವರಿಯಾಗಿ 896 ಕೋಟಿ ಬಿಡುಗಡೆ ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ಹೋಲಿಸಿದರೆ ಕಡಿಮೆ ಹಣಯಾಗಿದ್ದು ಇನ್ನಷ್ಟು ಹಣ ಬಿಡುಗಡೆ ಮಾಡುವಂತೆ ಪತ್ರ ಬರೆಯಲಾಗುವುದು ಎಂದು ಕೆ.ಎನ್.ರಾಜಣ್ಣ ಉತ್ತರಿಸಿದರು.
ಸಹಕಾರ ಸಂಘಗಳಿಗೆ ಹಣಕಾಸು ನೆರವು ನೀಡುವ ಪ್ರಮುಖ ಸಂಸ್ಥೆಗಳಲ್ಲಿ ನಬಾರ್ಡ್ ಒಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಬಾರ್ಡ್‍ನಿಂದ ಹೆಚ್ಚುವರಿ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ. ನಾವೆಲ್ಲರೂ ಹೆಚ್ಚುವರಿ ಅನುದಾನ ಬಿಡುಗಡೆಯಾಗುವ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದೇವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.