ಬೆಂಗಳೂರಿನಲ್ಲಿ ಮಾದಕ ದಂಧೆ ವಿರುದ್ಧ 711 ಪ್ರಕರಣ: 1,048 ಮಂದಿಯ ಬಂಧನ
81.21 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ
ಬೆಂಗಳೂರು, ಅ.8: ಮಾದಕ ವಸ್ತುಗಳ ದಂಧೆ ವಿರುದ್ಧದ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ನಗರ ಪೊಲೀಸರು, ಈವರೆಗೆ 711 ಪ್ರಕರಣಗಳನ್ನು ದಾಖಲಿಸಿಕೊಂಡು ಸುಮಾರು 81.21 ಕೋಟಿ ರೂ. ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, 2025ರ ಅಕ್ಟೋಬರ್ 8ರವರೆಗಿನ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ 711 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,013 ಭಾರತೀಯ ಹಾಗೂ 35 ವಿದೇಶಿ ಮೂಲದ ಆರೋಪಿಗಳ ಸಹಿತ 1,048 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 81.21 ಕೋಟಿ ರೂ. ಮೌಲ್ಯದ ಒಟ್ಟು 1483.30 ಕೆ.ಜಿ. ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಗರದ ಎಲ್ಲಾ ವಿಭಾಗಗಳಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಸಿಸಿಬಿ, ನಾಗರಿಕ ಪೊಲೀಸ್, ಸಿಎಆರ್ ಪೊಲೀಸ್, ಶ್ವಾನದಳ ತಂಡಗಳಿಂದ ಜಂಟಿಯಾಗಿ ಡ್ರಗ್ ಪೆಡ್ಲರ್‍ಗಳನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನಾಕಾಬಂದಿ ಹಾಗೂ ದಿಢೀರ್ ತಪಾಸಣೆಗಳ ಮೂಲಕ ಡ್ರಗ್ ಪೆಡ್ಲರ್‍ಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಗುಪ್ತಚರ ಮತ್ತು ತಾಂತ್ರಿಕ ಮೂಲಗಳನ್ನು ಬಳಸಿಕೊಂಡು, ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಿರುವುದರಿಂದ ಮಾದಕ ವಸ್ತುಗಳ ಮಾರಾಟ ಅಥವಾ ಪ್ರಚಾರಕ್ಕಾಗಿ ಬಳಸಲಾಗುವ ಸರ್ಫೇಸ್ ವೆಬ್ ಮತ್ತು ಡಾರ್ಕ್‍ನೆಟ್ ವೇದಿಕೆಗಳ ಕುರಿತು ನಿರಂತರವಾಗಿ ಕಣ್ಣಿಡಲು ಅನುಕೂಲಕರವಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದರು.
ಇದಲ್ಲದೆ, ಬಂಧಿತ ವಿದೇಶಿ ಪ್ರಜೆಗಳನ್ನು ವಾಪಸ್ ಕಳಿಸುವ ಕುರಿತು ಎಫ್‍ಆರ್‌ಆರ್‌ಓ, ಡಿರ್‌ಐ, ಎನ್‍ಸಿಬಿ ಮತ್ತಿತರ ಸಂಸ್ಥೆಗಳೊಂದಿಗೆ ನಿರಂತವಾಗಿ ಸಂಪರ್ಕದಲ್ಲಿದ್ದು, ವಿದೇಶಿಗರ ಕುರಿತು ಕಡ್ಡಾಯವಾಗಿ ಮಾಹಿತಿ ನೀಡದ ಮನೆ ಮಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ಕಾಲೇಜುಗಳು, ಎನ್‍ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಗಳು ಮತ್ತು ಮಾದಕ ವಸ್ತು ದುರ್ಬಳಕೆಯನ್ನು ತಡೆಯಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಒಂದೇ ತಿಂಗಳಲ್ಲಿ 23.84 ಕೋಟಿ ಮೌಲ್ಯದ ಮಾಲು ಜಪ್ತಿ, 6 ಮಂದಿ ಬಂಧನ
ಹಿಂದಿನ ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರತ್ಯೇಕ ಪ್ರಕರಣಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳ ಸಹಿತ ಒಟ್ಟು 6 ಜನರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳ ಪಾರ್ಸೆಲ್ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಂಚೆ ಕಚೇರಿಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಜಾಲದಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಒಟ್ಟಾರೆ ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ.
- ಸೀಮಂತ್‍ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು.