×
Ad

‘ಒಳ ಮೀಸಲಾತಿ’ ಆ.1ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ : ಎ.ನಾರಾಯಣಸ್ವಾಮಿ

Update: 2025-07-23 00:44 IST

ಬೆಂಗಳೂರು : ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಆ.1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಮಾದಿಗರ ಸಂಘಟನೆಗಳು ತೀರ್ಮಾನಿಸಿವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಕುರಿತು ಆ.1ಕ್ಕೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಚಂದ್ರಚೂಡ್ ಅವರು ತೀರ್ಪು ಕೊಟ್ಟು ಒಂದು ವರ್ಷ ಆಗಲಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ಸದನದಲ್ಲಿ ಈ ವಿಷಯವನ್ನು ಮಂಡಿಸದೇ ಇದ್ದಲ್ಲಿ, ಮಾದಿಗರು ‘ಕರ್ನಾಟಕ ಬಂದ್’ಗೆ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲನೇ ಸಂಪುಟ ಸಭೆಯಲ್ಲೇ ಒಳ ಮೀಸಲಾತಿಗೆ ಒಪ್ಪಿಗೆ ನೀಡಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಕುಂಟು ನೆಪ ಹೇಳಿ ನ್ಯಾ.ನಾಗಮೋಹನದಾಸ್ ಸಮಿತಿ ರಚಿಸಿದರು. 40 ದಿನಗಳಲ್ಲಿ ವರದಿ ತರಿಸುವುದಾಗಿ ಹೇಳಿ 6 ತಿಂಗಳಾಗಿವೆ. ಇದು ಸರಕಾರ ದಲಿತರಿಗೆ ಮಾಡುತ್ತಿರುವ ದ್ರೋಹ, ಮೋಸ ಎಂದು ಟೀಕಿಸಿದರು.

ನಾಗಮೋಹನದಾಸ್ ಅವರು ಕೆಲವು ಮಾಹಿತಿ ಕೇಳಿ ಸರಕಾರಕ್ಕೆ ಪತ್ರ ಬರೆದರೂ ಉತ್ತರ ಲಭಿಸಿಲ್ಲ. ಸರಕಾರವೇ ಇದೆಲ್ಲವನ್ನೂ ಮುಚ್ಚಿಡುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಮುಖಂಡ ಸಂತೋಷ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News