ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಅಂಗೀಕಾರ; ಅಡ್ಡಗೋಡೆ ಮೇಲೆ ದೀಪವಿಟ್ಟ ಸರಕಾರ

Update: 2026-08-20 23:05 IST

ಶಿವರಾಜ ತಂಗಡಗಿ, ವಿ.ಸುನೀಲ್ ಕುಮಾರ್

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ ಅಂಗೀಕಾರದ ವಿಚಾರದಲ್ಲಿ ರಾಜ್ಯ ಸರಕಾರ ಹೈಕೋರ್ಟ್ ಆದೇಶದ ನೆಪದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ನೀಡಿದೆ.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಉತ್ತರ ನೀಡಿದ್ದು, ವರದಿ ಅನುಷ್ಠಾನದ ಕುರಿತು ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ. ಸಂವಿಧಾನದ 340ನೇ ವಿಧಿಯ ಚೌಕಟ್ಟಿನಡಿ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಸಂಬಂಧಿಸಿದ 15(4) ಮತ್ತು 16(4)ನೇ ವಿಧಿಗಳನ್ವಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ, 1995 ಜಾರಿಗೆ ತರಲಾಗಿದೆ.

ಈ ಅಧಿನಿಯಮದಡಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆಯೋಗಕ್ಕೆ ಅಧಿಕಾರ ನೀಡಲಾಗಿದೆ. 2014ರ ತಿದ್ದುಪಡಿ ಮೂಲಕ ರಾಜ್ಯದ ಎಲ್ಲ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷೆಯಲ್ಲಿ ಜನರ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಜೊತೆಗೆ ಧರ್ಮ, ಸಮುದಾಯ/ಜಾತಿ ಸೇರಿದಂತೆ ವಿವಿಧ ವಿವರಗಳನ್ನು ಒಳಗೊಂಡ ದತ್ತಾಂಶ ಸಂಗ್ರಹಿಸಲಾಗುತ್ತದೆ.

ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಜಾತಿಗೆ ಸಂಬಂಧಿಸಿದ ಮಾಹಿತಿಯೂ ಅಗತ್ಯವಾಗಿದ್ದು, ಸುಪ್ರೀಂಕೋರ್ಟ್ ಹಿಂದುಳಿದಿರುವಿಕೆ ನಿರ್ಧಾರದಲ್ಲಿ ಜಾತಿಯನ್ನು ಪ್ರಮುಖ ಹಾಗೂ ನ್ಯಾಯಸಮ್ಮತ ಅಂಶವೆಂದು ಗುರುತಿಸಿದೆ. ಮೀಸಲಾತಿ ಸೌಲಭ್ಯ ಒದಗಿಸುವ ಉದ್ದೇಶಕ್ಕಾಗಿ ಅರ್ಹ ಹಿಂದುಳಿದ ವರ್ಗಗಳ ಜಾತಿಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈವರೆಗೆ ಎರಡು ಬಾರಿ ಇಂತಹ ಸಮೀಕ್ಷೆಗಳನ್ನು ನಡೆಸಲಾಗಿದೆ. ಹಿಂದಿನ ಸಮೀಕ್ಷೆಯಲ್ಲಿ ಭೌತಿಕ ನಮೂನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿತ್ತು. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು 2024ರ ಫೆಬ್ರವರಿ 29ರಂದು ಹಿಂದಿನ ದತ್ತಾಂಶಗಳ ಅಧ್ಯಯನ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. 10 ವರ್ಷ ಹಳೆಯ ದತ್ತಾಂಶವಾಗಿರುವ ಹಿನ್ನೆಲೆಯಲ್ಲಿ 2025ರಲ್ಲಿ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸರಕಾರ ನಿರ್ಧರಿಸಿತ್ತು. ಈ ಬಾರಿ ಡಿಜಿಟಲ್ ಮಾದರಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದ್ದು, ಮಧುಸೂದನ್ ನಾಯಕ್ ನೇತೃತ್ವದ ಆಯೋಗವು 2026ರ ಮೇ 27ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ವರದಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಆದರೆ, ವರದಿಯನ್ನು ಅಂಗೀಕರಿಸಿರುವ ಕುರಿತು ಸಚಿವರು ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ. 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ 166.85 ಕೋಟಿ ರೂ. ಹಾಗೂ 2025ರ ಸಮೀಕ್ಷೆಗೆ 252.65 ಕೋಟಿ ರೂ.ಗಳು ವೆಚ್ಚವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News